ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
ರಾಜ್ಯದಲ್ಲೇ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತ ನಾಡಿನ ಗಮನಸೆಳೆದಿರುವ ಚಿತ್ರದುರ್ಗದ ಹಿಂದು ಮಹಾಗಣಪತಿ ಉತ್ಸವದ ಶೋಭಾಯಾತ್ರೆಗೆ ಕ್ಷಣಗಣನೆ ಶುರುವಾಗಿದೆ.
ಶನಿವಾರ ನಡೆಯುವ ಗಣಪತಿಯ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರರಾಗಿದ್ದಾರೆ. ಒಂದೂವರೆ ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲು ಸಜ್ಜಾಗಿವೆ.
ಈ ಉತ್ಸವಕ್ಕಾಗಿ ಇಡೀ ನಗರ ಕೇಸರಿಮಯವಾಗಿದೆ. ಸಾವಿರಾರು ಮೀಟರ್ ಕೇಸರಿ ಬಟ್ಟೆ ಬಳಸಲಾಗಿದೆ. ಮದಕರಿನಾಯಕ ವೃತ್ತ ದೇಶಭಕ್ತರ ಭಾವಚಿತ್ರಗಳೊಂದಿಗೆ ಕಂಗೊಳಿಸುತ್ತಿದೆ. ಶುಕ್ರವಾರ ಸಂಜೆಯ ಬಳಿಕ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ. ಅಷ್ಟೇ ಅಲ್ಲದೆ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ, ಕನಕ ವೃತ್ತಗಳು ಜನರನ್ನು ಆಕರ್ಷಿಸುತ್ತಿವೆ.
ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಧ್ವಜಗಳನ್ನು ಕಟ್ಟಲಾಗಿದೆ. ಪ್ರಮುಖ ವೃತ್ತಗಳು, ಅಂಗಡಿ ಮುಂಗಟ್ಟುಗಳು ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಪ್ರಮುಖ ವೃತ್ತಗಳು ಕೇಸರಿ, ಬಿಳಿ, ಹಸಿರು ತ್ರಿವರ್ಣಗಳಿಂದ ಸಿಂಗಾರಗೊಂಡಿವೆ. ಇದಲ್ಲದೆ ಯಾತ್ರೆಗೆ ಶುಭಾಶಯ ಕೋರುವ ಬ್ಯಾನರ್, ಬಂಟಿಂಗ್ಸ್‌ಗಳು, ಗಣ್ಯರ, ರಾಜಕೀಯ ಮುಖಂಡರ ಆಳೆತ್ತರದ ಕಟೌಟ್‌ಗಳು ಎದ್ದು ನಿಂತಿವೆ.
ಶೋಭಾಯಾತ್ರೆಯ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಬಯಸಿ ಜನರು ಚಿತ್ರದುರ್ಗದತ್ತ ಹರಿದು ಬರುತ್ತಿದ್ದಾರೆ. ಸ್ನೇಹಿತರು, ಬೀಗರು, ನೆಂಟರಿಷ್ಟರು ಒಂದು ದಿನ ಮುಂಚೆಯೇ ಆಗಮಿಸಿ ಠಿಕಾಣಿ ಹೂಡಿದ್ದಾರೆ.
ಪೊಲೀಸ್ ಸರ್ಪಗಾವಲು
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. 8 ಕೆಎಸ್‌ಆರ್‌ಪಿ, 8 ಡಿಎಆರ್, 3 ಕ್ಯೂಆರ್‌ಟಿ ತಂಡಗಳನ್ನು ಬಳಸಿಕೊಳ್ಳಲಾಗಿದೆ. ಐಜಿಪಿ, ಇಬ್ಬರು ಎಸ್ಪಿ, ಮೂವರು ಎಎಸ್ಪಿ, 13 ಡಿವೈಎಸ್ಪಿ ಸೇರಿ ಹಿರಿಯ ಅಧಿಕಾರಿಗಳು ಇರಲಿದ್ದಾರೆ.
ಕಣ್ಗಾವಲಿಗಾಗಿ 50 ಕ್ಕೂ ಹೆಚ್ಚು ಕಡೆ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಮಾರ್ಗದ 28 ಕ್ಕೂ ಹೆಚ್ಚು ಕಡೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪ್ರವೇಶ ನಿರ್ಬಂಧಿಸಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳಗಳಲ್ಲಿ ತುಕಡಿಗಳನ್ನು ನಿಯೋಜಿಸಲಾಗಿದೆ.
ಈ ನಡುವೆ ಶುಕ್ರವಾರ ಸಂಜೆ ಪೊಲೀಸರು ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಪಥ ಸಂಚಲನ ನಡೆಸಿದರು. ಅದಕ್ಕೂ ಮುನ್ನ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿ ಭಾಗವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಜತೆ ಪಥ ಸಂಚಲನಕ್ಕೆ ಹೆಜ್ಜೆ ನೀಡಿದರು.
ಶೋಭಾಯಾತ್ರೆಗೆ ಬೆಳಗ್ಗೆ ಚಾಲನೆ
ಜೈನಧಾಮ ಬಳಿ ಪ್ರತಿಷ್ಠಾಪಿತ ಹಿಂದು ಮಹಾಗಣಪತಿಗೆ ಶನಿವಾರ ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ಶೋಭಾಯತ್ರೆಗೆ ಚಾಲನೆ ಸಿಗಲಿದೆ. ಬೆಳಗ್ಗೆ 10 ಕ್ಕೆ ವಿಎಚ್‌ಪಿ ಅಖಿಲ ಭಾರತೀಯ ಸಹಕಾರ್ಯದರ್ಶಿ ದೆಹಲಿಯ ಅಂಬರೀಷ್‌ಸಿಂಗ್ ಯಾತ್ರೆಗೆ ಚಾಲನೆ ನೀಡುವರು. ಜಿಲ್ಲೆಯ ಅನೇಕ ಮಠಾಧೀಶರು, ಗಣ್ಯರು ಉಪಸ್ಥಿತರಿರುವರು.
ವಿಎಚ್‌ಪಿ ಪ್ರಾಂತ ಸಮಿತಿ ಸದಸ್ಯ ಜ.ರ.ರಾಮಮೂರ್ತಿ, ಶಿವಮೊಗ್ಗ ವಿಭಾಗ ಕಾರ್ಯದರ್ಶಿ ಡಿ.ಷಡಾಕ್ಷರಪ್ಪ, ಉತ್ಸವ ಸಮಿತಿ ಅಧ್ಯಕ್ಷ ವಿಪುಲ್ ಜೈನ್, ಮಾರ್ಗದರ್ಶಕ ಬದರಿನಾಥ್, ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ ಸೇರಿ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸುವರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ
ಶೋಭಾಯಾತ್ರೆಯು ಫೇಸ್‌ಬುಕ್, ವಾಟ್ಸ್ ಆ್ಯಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದೆ. ಯುವಸಮೂಹ ಮಂಟಪದ ಮುಂಭಾಗ ಸೆಲ್ಫಿಗೆ ಮುಗಿಬಿದ್ದಿದ್ದಾರೆ. ನಗರದೊಳಗೆ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸೇರಿ ಭಾರಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ನಗರದ ಶಾಲೆಗಳಿಗೆ ರಜೆ
ಶೋಭಾಯಾತ್ರೆಗೆ ಜನಸಾಗರವೇ ಹರಿದು ಬರುವ ಕಾರಣ ಕಾನೂನು, ಸುವ್ಯವಸ್ಥೆ ಜತೆಗೆ ಮಕ್ಕಳ ಹಿತರಕ್ಷಣೆಗಾಗಿ ರಜೆ ನೀಡಲು ಪೊಲೀಸ್ ಇಲಾಖೆ ಪತ್ರ ವ್ಯವಹಾರ ನಡೆಸಿದ್ದು, ಅದಕ್ಕೆ ಒಪ್ಪಿಗೆ ನೀಡಿ ನಗರ ವ್ಯಾಪ್ತಿಯ ಎಲ್ಲ ಶಾಲೆಗಳಿಗೂ ಸೆ. 17 ರಂದು ರಜೆ ನೀಡಲಾಗಿದೆ. ಆ ದಿನದ ತರಗತಿಯನ್ನು ಮುಂದಿನ ಯಾವುದಾದರೊಂದು ದಿನ ತೆಗೆದುಕೊಳ್ಳಲಾಗುವುದು ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ತಿಳಿಸಿದ್ದಾರೆ.