ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಜೂ. 27, 28ರಂದು ಕಣ್ಣ ಮುಂದಿನ ಬೆಳಕು ಎಂಬ ರಾಜ್ಯ ಮಟ್ಟದ ಯುವ ಸಾಹಿತ್ಯ ಸಮಾವೇಶ ಏರ್ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 27ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಡಾ. ಓ.ಎಲ್. ನಾಗಭೂಷಣಸ್ವಾಮಿ ಸಮಾವೇಶ ಉದ್ಘಾಟಿಸುವರು. ಡಾ. ಎಂ.ಡಿ. ಒಕ್ಕುಂದ ಆಶಯ ನುಡಿಗಳನ್ನಾಡುವರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಉಪಸ್ಥಿತರಿರುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
11.30ಕ್ಕೆ ಅಂತರಂಗದ ಮೃದಂಗ ಗೋಷ್ಠಿಯಲ್ಲಿ ನಾಟಕ ಕುರಿತು ರಾಜೇಂದ್ರ ಪ್ರಸಾದ, ರೇಣುಕಾ ರಮಾನಂದ, ಸಣ್ಣಕಥೆ ಕುರಿತು ಮಂಜು ಚೆಳ್ಳೂರ, ಶಾಂತಿ ಅಪ್ಪಣ್ಣ, ಕಾದಂಬರಿ ಕುರಿತು ವಿ.ಆರ್. ಕಾರ್ಪೆಂಟರ್ ಮಾತನಾಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಏರ್ಪಡಿಸಿರುವ ಹೊಟ್ಯಾಗಿನ ಮಾತು ಗೋಷ್ಠಿಯಲ್ಲಿ ವಿಮರ್ಶೆ ಕುರಿತು ಮಂಜುಳಾ ಗೋನಾಳ, ಡಾ. ರಂಗನಾಥ ಕಂಟನಕುಂಟೆ, ಜಾನಪದ ಕುರಿತು ಡಾ. ಅರುಣ ಕೂಡ್ಲಗಿ, ಅನುವಾದ ಕುರಿತು ಅಜಯ ವರ್ಮಾ ಅಲ್ಲೂರಿ, ನಾಗರೇಖಾ ಗಾಂವಕರ ಹಾಗೂ ಮಕ್ಕಳ ಸಾಹಿತ್ಯ ಕುರಿತು ಸೋಮು ಕುದರಿಹಾಳ ಮಾತನಾಡಲಿದ್ದಾರೆ. ಸಂಜೆ 6 ಗಂಟೆಗೆ ಕವಿಗೋಷ್ಠಿ ನಡೆಯಲಿದೆ ಎಂದರು.
ಜೂ. 28ರಂದು ಬೆಳಗ್ಗೆ 9.30ಕ್ಕೆ ಕಂಡದ್ದು ಕಂಡ ಹಾಗೆ ಗೋಷ್ಠಿಯಲ್ಲಿ ಕಾವ್ಯ ಕುರಿತು ಡಾ. ರಾಮಲಿಂಗಪ್ಪ ಬೇಗೂರ, ಸಣ್ಣಕಥೆ ಹಾಗೂ ಕಾದಂಬರಿ ಕುರಿತು ಟಿ.ಎಸ್. ಗೊರವರ ಮಾತನಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಕಂಡದ್ದು ಕಂಡ ಹಾಗೆ-2 ಗೋಷ್ಠಿ ನಡೆಯಲಿದ್ದು, ವಿಮರ್ಶೆ, ಸಂಶೋಧನೆ ಕುರಿತು ಡಾ. ಸುಭಾಸರಾಜ ಮಾನೆ, ಅನುವಾದ ಕುರಿತು ಡಾ. ಮಲ್ಲಪ್ಪ ಬಂಡಿ, ಮಕ್ಕಳ ಸಾಹಿತ್ಯ ಕುರಿತು ಡಾ. ನಿಂಗು ಸೊಲಗಿ ಮಾತನಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಯಾಗಿ ಡಾ. ವೆಂಕಟೇಶಯ್ಯ ನೆಲ್ಲಿಕುಂಟೆ ಆಗಮಿಸಲಿದ್ದಾರೆ. ಡಾ. ರಹಮತ್ ತರೀಕೆರೆ ಉಪಸ್ಥಿತರಿರುವರು.
ಸಮಾವೇಶಕ್ಕೆ ಈಗಾಗಲೇ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಯುವಕರಿಗೆ ಪ್ರೋತ್ಸಾಹ ನೀಡಲು ಹಾಗೂ ಬರವಣಿಗೆ ನ್ಯಾಯಯುತ ಹಾಗೂ ಶಿಸ್ತು ಬದ್ಧವಾಗಿರಲಿ ಎಂಬುದನ್ನು ತಿಳಿಸಲು ಸಮಾವೇಶ ಸಹಕಾರಿ. ಇದರ ಜತೆಗೆ ಹೊಸ ಬರವಣಿಗೆಗಾರರಿಗೆ ಸಮಾವೇಶ ದಿಕ್ಸೂಚಿಯಾಗಲಿದೆ ಎಂದರು.
ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ, ಇತರರು ಇದ್ದರು.