ಜಿಲ್ಲೆ

ಆಧುನಿಕತೆಯಿಂದ ಸಂಸ್ಕೃತಿ ಆಚರಣೆಯಲ್ಲಿ ಬದಲಾವಣೆ: ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ್ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಹಿಂದಿನ ಸಂಪ್ರದಾಯದ ಬುದ್ಧಿವಂತಿಕೆ ವಿಚಾರಗಳನ್ನಿಟ್ಟುಕೊಂಡು ಮುಂದಿನ ಬೆಳವಣಿಗೆ ಕಾಣಬೇಕು ಎಂದು ಮಹಿಳಾ ಸರ್ಕಾರಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್.ನಾಗರಾಜ್ ಅಭಿಪ್ರಾಯಪಟ್ಟರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗವು ರೂಸಾ 2.0 ಅಡಿಯಲ್ಲಿ ಆಯೋಜಿಸಿದ್ದ ಭಾರತೀಯ ಜ್ಞಾನ ವ್ಯವಸ್ಥೆ ಮತ್ತು ಲಿಂಗತ್ವ ನ್ಯಾಯ ಎಂಬ ವಿಷಯದ ಕುರಿತು ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು,ನಮ್ಮ ಹಿಂದಿನ ತಲೆಮಾರಿನ ಕಲೆ, ಸಾಹಿತ್ಯ ಸಂಸ್ಕೃತಿಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ರವಾನೆಯಾಗಿವೆ. ಆದರೆ ಆಧುನಿಕ ಜೀವನ ಸ್ಪರ್ಶದಿಂದಾಗಿ ಕೊಂಚ ಬದಲಾವಣೆಯನ್ನು ನಾವು ಹೊಂದುತಿದ್ದೇವೆ ಎಂದರು.

ಮಹಿಳೆ ಮತ್ತು ಪುರುಷರ ನಡುವೆ ತಾರತಮ್ಯ ಇಲ್ಲವಾಗಬೇಕಾದರೆ ಮಹಿಳೆಯರಿಗೆ ಸಮಾನ ಅಧಿಕಾರ, ಸಮಾನ ಅವಕಾಶ, ಸಮಾನ ನ್ಯಾಯ ಸಿಗಬೇಕು. ಇಲ್ಲವಾದರೆ ತಾರತಮ್ಯದ ನಿರ್ಮೂಲನೆಯ ಮಾತು ಕನಸಿನಲ್ಲಿ ಮಾತ್ರ. ಮಹಿಳೆಯರ ಶಿಕ್ಷಣದಲ್ಲಿ ಸಬಲೀಕರಣ, ಆರ್ಥಿಕ ಸಬಲೀಕರಣ ಇಲ್ಲದೆ ಲಿಂಗ ಸಮಾನತೆ ಕುರಿತು ಮಾತನಾಡುವುದು ವ್ಯರ್ಥವಾಗುತ್ತದೆ. ಆದ್ದರಿಂದ ಮಹಿಳೆಯರು ಜ್ಞಾನದಲ್ಲಿ ಹಣಕಾಸಿನಲ್ಲಿ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು ಮಾತನಾಡಿ, ಭಾರತದ ಜ್ಞಾನಪರಂಪರೆ ತುಂಬಾ ದೊಡ್ಡದು. ಇತಿಹಾಸದ ಪುಟ ಗಮನಿಸಿದರೆ ವೇದದಿಂದ ಪ್ರಾರಂಭವಾಗಿ ಜೈನಿಸಂ ಬೌದ್ಧಿಸಂ ಅರಬಿಕ್ ಆಂಗ್ಲ ಜ್ಞಾನದವರೆಗೂ ವಿವಿಧ ಜ್ಞಾನಗಳ ಸಂಗಮವಾಗಿದೆ. ವಿವಿಧ ಕಾಲಘಟ್ಟದಲ್ಲಿ ಸಾಂಸ್ಕೃತಿಕ, ಸಾಮಾಜಿಕವಾಗಿ ಭಾಷೆಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳಿಗೆ ನಮ್ಮ ಭಾರತ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಸ್ವತಂತ್ರ ಪೂರ್ವ ಭಾರತದಲ್ಲಿ ಲಿಂಗ ಅಸಮಾನತೆ ಇದ್ದಾಗಲೂ ಕೆಲವು ಮಹಿಳೆಯರು ತತ್ವಜ್ಞಾನ, ಸಾಹಿತ್ಯ, ಆಡಳಿತದಲ್ಲಿ ಸಾಧನೆ ಮಾಡಿರುವುದು ಚರಿತ್ರೆಯಲ್ಲಿ ಕಾಣಬಹುದು. ಸಂಪ್ರದಾಯ ಸಮಾಜದಲ್ಲಿ ಲಿಂಗ ತಾರತಮ್ಯ ಸಹಜವಾಗಿದ್ದು, ಅದನ್ನು ನಾವು ಹೋಗಲಾಡಿಸಬೇಕು. 12ನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿ ಅವರ ವಚನದಲ್ಲಿ ಅಂದಿನ ಕಾಲದ ಸಾಮಾಜಿಕ ಅಸಮಾನತೆಯನ್ನು ತಿಳಿಯಬಹುದಾಗಿದೆ ಎಂದು ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾನಿಲಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಆರ್.ರಾಜೇಶ್, ಮೈಸೂರು ಮಹಾರಾಜ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರೊ.ರೇಖಾ ಕೆ.ಜಾಧವ್, ಪಾಂಡವಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಎಂ.ಬಿ.ಪ್ರಮೀಳಾ, ಸಹ ಪ್ರಾಧ್ಯಾಪಕರಾದ ಮನ್ಸೂರ್ ಪಾಷ, ಡಾ.ಕೆ.ಎನ್.ಶ್ರೀನಿವಾಸ, ಡಾ.ಕೆ.ಎಂ.ಮಂಗಳಮ್ಮ, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಉಪನ್ಯಾಸಕ ಎಂ.ಬಿ.ತೇಜೋಮೂರ್ತಿ ಇದ್ದರು.