ಜಿಲ್ಲೆ

ಶಾಸನ, ವೀರಗಲ್ಲು ರಕ್ಷಿಸುವ ಕೆಲಸವಾಗಲಿ: ಇತಿಹಾಸ ತಜ್ಞ ಡಾ.ಎಸ್.ರಾಜೇಂದ್ರಪ್ಪ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆ ಅದ್ಭುತ ದೇವಾಲಯ, ಶಾಸನ ಮತ್ತು ವೀರಗಲ್ಲುಗಳ ನೆಲೆಯಾಗಿದೆ. ಆದರೆ ಕೆಲವೆಡೆ ಅವುಗಳ ರಕ್ಷಣೆ ಸರಿಯಾಗಿ ಆಗುತ್ತಿಲ್ಲ. ಆದ್ದರಿಂದ ಅವುಗಳನ್ನು ಉಳಿಸಿ ರಕ್ಷಿಸುವ ಉತ್ತರಾಧಿಕಾರಿಯಾಗಿ ವಿದ್ಯಾರ್ಥಿಗಳು ಕೆಲಸ ಮಾಡಬೇಕು ಎಂದು ಇತಿಹಾಸ ತಜ್ಞ ಡಾ.ಎಸ್. ರಾಜೇಂದ್ರಪ್ಪ ಸಲಹೆ ನೀಡಿದರು

ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಇತಿಹಾಸ ವಿಭಾಗದಿಂದ ಕರ್ನಾಟಕ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಎಂಬ ವಿಷಯದ ಕುರಿತು ರೂಸಾ 2.0 ಅಡಿ ಆಯೋಜಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಗರದ ರೈಲು ನಿಲ್ದಾಣದ ಪಕ್ಕದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಬಲಭಾಗದ ಹಿಂಭಾಗಕ್ಕೆ 15ನೇ ಶತಮಾನದ ವೀರಗಲ್ಲು, ಮಾಸ್ತಿಕಲ್ಲು ಇದೆ. ಭಕ್ತರು ಎಣ್ಣೆ ದೀಪ, ಪುಷ್ಪವನ್ನಿಟ್ಟು ಪೂಜೆ ಮಾಡುತ್ತಿದ್ದಾರೆ. ಇಂತಹ ಸ್ಮಾರಕವನ್ನು ತಂದು ಜಿಲ್ಲಾ ಕಚೇರಿ ಅಥವಾ ಕಾಲೇಜು ಆವರಣದಲ್ಲಿ ರಕ್ಷಿಸಬೇಕು. ಆಗ ಮಾತ್ರ ಇವು ಮುಂದಿನ ಜನರಿಗೆ ಇತಿಹಾಸವನ್ನು ಸಾರುವಂತಾಗುತ್ತವೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆ ಗೆಜೆಟಿಯರ್ 2003ರಲ್ಲಿ ಪ್ರಕಟವಾಗಿದೆ. ಇದರಲ್ಲಿ ಪ್ರತಿಯೊಂದು ಊರಿನ ಮಾಹಿತಿ ಹೊಂದಿದೆ. ಜತೆಗೆ ಮಂಡ್ಯ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗಳು, ಜಿಲ್ಲೆಗೆ ಸಂಬಂಧಿಸಿದಂತ ವೈವಿಧ್ಯತೆಯ ವಿಷಯಗಳನ್ನು ಒಳಗೊಂಡಿದೆ. ಇಂತಹ ವಿಷಯಗಳನ್ನು ವಿದ್ಯಾರ್ಥಿಗಳು ಓದಿದರೆ ಜಿಲ್ಲೆಯ ಬಗ್ಗೆ ಸಂಪೂರ್ಣ ತಿಳಿವಳಿಕೆ ಬರುತ್ತದೆ. ಬೂದನೂರು, ಬಸರಾಳು, ಅರಕೆರೆ, ನಾಗಮಂಗಲ, ಸಿಂಧಘಟ್ಟ, ಕಿಕ್ಕೇರಿ ದೇವಾಲಯಗಳು ಹೊಯ್ಸಳರ ಅದ್ಭುತ ನೈಪುಣ್ಯತೆಯ ಇತಿಹಾಸವನ್ನು ಸಾರುತ್ತವೆ ಎಂದು ಹೇಳಿದರು.

ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಕೃಷ್ಣೇಗೌಡ ಮಾತನಾಡಿ, ಇಂದಿನ ಪೀಳಿಗೆಗೆ ಇತಿಹಾಸದ ಓದು, ಗ್ರಹಿಕೆ ಹಿಂದೆಂದಿಗಿಂತಲೂ ಪ್ರಸ್ತುತವಾಗಿದೆ. ಭಾರತದ ಇತಿಹಾಸ ಪರಂಪರೆ, ಸಂಸ್ಕೃತಿ, ಶ್ರೇಷ್ಟತೆಯನ್ನು ವಿದ್ಯಾರ್ಥಿಗಳು ಅರಿಯಬೇಕು. ಕರ್ನಾಟಕ ಭಾರತದ ಸಂಸ್ಕೃತಿಗೆ ತನ್ನದೇ ಆದ ವಿಶಿಷ್ಟವಾದ ಸ್ಥಾನಮಾನ ನೀಡಿದೆ. ಅಮೆರಿಕಾ, ಯುರೋಪ್ ದೇಶಗಳ ಇತಿಹಾಸಕ್ಕಿಂತಲೂ ನಿಮ್ಮ ಊರಿನ ಇತಿಹಾಸ ತಿಳಿದುಕೊಳ್ಳುವುದು ಬಹಳ ಮುಖ್ಯ. ಆಗ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮದ್ದೂರಿನ ತಾಲೂಕಿನಲ್ಲಿರುವ ನಾಯಿಶಾಸನ ಮನುಷ್ಯ ಮತ್ತು ಪ್ರಾಣಿ ನಡುವಿನ ಬದುಕನ್ನು ತಿಳಿಸುವ ಹೆಗ್ಗುರುತ್ತಾಗಿದೆ. ಇದೇ ರೀತಿ ಪ್ರತಿ ಶಾಸನ, ಸ್ಮಾರಕಗಳು ಮಾನವನ ಬದುಕಿನ ಒಂದೊಂದು ಕಥೆ ಹೇಳುವ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು ಮಾತನಾಡಿ, ವಿಜಯನಗರ ಸಾಮ್ರಾಜ್ಯ ಮತ್ತು ಅಶೋಕನ ಶಾಸನಗಳು ಭಾರತದ ಭವ್ಯ ಇತಿಹಾಸವನ್ನು ಹೇಳುತ್ತವೆ. ಸ್ಮಾರಕ ಮತ್ತು ಶಾಸನಗಳ ಅಧ್ಯಯನದ ಮೂಲಕ ಆಳವಾದ ಇತಿಹಾಸವನ್ನು ತಿಳಿಯಬಹುದು. ಆಸ್ಟ್ರೇಲಿಯಾ ದೇಶದಲ್ಲಿ ಹೆಚ್ಚು ವಸ್ತು ಸಂಗ್ರಹಾಲಯಗಳಿವೆ. ಅಲ್ಲಿ ಇತಿಹಾಸ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ. ಆದರೆ ನಮ್ಮಲ್ಲಿ ಶಾಸನಗಳು ಅನಾಥವಾಗಿವೆ. ಭಾರತದಲ್ಲಿ ಅವುಗಳನ್ನು ಉಳಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ರಂಗರಾಜು, ಇತಿಹಾಸಕಾರ ಮೊಹಮ್ಮದ್ ಖಲೀಂ ಮುಲ್ಲಾ, ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಎಸ್.ಶಿವರಾಮು, ಡಾ.ಕೆ.ಎಂ.ಕವಿತಾ, ಟಿ.ಎನ್.ಶಾಂತರಾಜು, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ.ರವಿಕಿರಣ್, ಹೇಮಲತಾ, ರೂಸಾ 2.0 ಸಂಯೋಜಕಿ ಡಾ.ಕೆ.ಎಂ.ಮಂಗಳಮ್ಮ, ಉಪನ್ಯಾಸಕರಾದ ಜಿ.ಜೆ.ಪ್ರಕಾಶ್, ಪೂರ್ಣಿಮಾ ಹಾಜರಿದ್ದರು.