ಜಿಲ್ಲೆ

ಸಾಮಾಜಿಕ ಮಾಧ್ಯಮ ಬಳಕೆಯಿಂದ ಸಮಸ್ಯೆ: ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರವೀಶ್ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಪ್ರಸ್ತುತ ಜಗತ್ತು ಸಾಮಾಜಿಕ ಮಾಧ್ಯಮದ ಮೇಲೆ ತುಂಬಾ ಅವಲಂಬಿತವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಸಾಮಾಜಿಕ ಮಾಧ್ಯಮವಿಲ್ಲದೆ ನಮ್ಮ ಯಾವುದೇ ಕೆಲಸ ಕಾರ್ಯಗಳು ಸಾಗುವುದಿಲ್ಲ ಎಂದು ಮೈಸೂರು ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರವೀಶ್ ಅಭಿಪ್ರಾಯಿಸಿದರು.

ನಗರದ ಮಹಿಳಾ ಸರ್ಕಾರಿ ಕಾಲೇಜಿನ(ಸ್ವಾಯತ್ತ)ನಲ್ಲಿ ಮನೋವಿಜ್ಞಾನ ವಿಭಾಗದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ‘ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವ ಮತ್ತು ಪರಿಣಾಮ’ದ ಕುರಿತು ಉಪನ್ಯಾಸ ನೀಡಿದ ಅವರು, ಪ್ರತಿ ಕೆಲಸ ಕಾರ್ಯಗಳಿಂದ ಹಿಡಿದು ಊಟ ಮಾಡುವವರೆಗೂ ನಮಗೆ ಕೈಯಲ್ಲಿ ಮೊಬೈಲ್ ಫೋನ್ ಇರಲೇಬೇಕು. ಅದರಲ್ಲೂ ನಾವು ವಾಟ್‌ಆ್ಯಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ವೇಗವಾಗಿ ಮುಳುಗುತ್ತಿದ್ದೇವೆ ಎಂದರು.

ದೇಶದ ಭವಿಷ್ಯವಾದ ಯುವಜನಾಂಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪರಿಣಾಮವಾಗಿ ಶೈಕ್ಷಣಿಕ ಬದುಕು ಕುಂಠಿತವಾಗುವುದರ ಜತೆಗೆ ಮನೋ ಸಾಮಾಜಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು ಮಹಾರಾಜ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಲ್ಯಾನ್ಸಿ ಡಿಸೋಜ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಯುವ ಜನಾಂಗದ ಮೇಲೆ ಸಾಮಾಜಿಕ ಮಾಧ್ಯಮದ ಪರಿಣಾಮದ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಕೆ.ಗುರುರಾಜ ಪ್ರಭು ವಹಿಸಿ ಮಾತನಾಡಿದರು. ಪ್ರಾಧ್ಯಾಪಕರಾದ ಮಂಗಳಮ್ಮ, ಡಾ.ರೇಖಾ, ವಿನಯಕುಮಾರಿ, ರವಿಕುಮಾರ್ ಇತರರಿದ್ದರು.