ಮಂಡ್ಯ: ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಗಣನೀಯವಾಗಿ ಏರಿಕೆಯಾಗುತ್ತಿರುವುದು ಆತಂಕವನ್ನು ಉಂಟು ಮಾಡಿದೆ ಎಂದು ಪಿಇಟಿ ಪ್ರಧಾನ ಕಾರ್ಯದರ್ಶಿ ಎಚ್.ಎಲ್.ಶಿವಪ್ರಸಾದ್ ಹೇಳಿದರು.
ನಗರದ ಪಿಇಎಸ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ಆಯೋಜಿಸಿದ್ದ ವಿನ್ಯಾಸ್-2024 ರಾಜ್ಯಮಟ್ಟದ ತಾಂತ್ರಿಕ ಸ್ಪರ್ಧೆಗಳ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕ ವಿದ್ಯಾರ್ಥಿಗಳು ಘನ ತ್ಯಾಜ್ಯ ವಿಲೇವಾರಿ ಬಗ್ಗೆ ಅರಿವಿನ ಒಂದು ಸ್ಪರ್ಧೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಇದು ಕಾಲೇಜಿನ ಸ್ಪರ್ಧೆಯ ಮಟ್ಟಕ್ಕೆ ಸೀಮಿತವಾಗದೆ, ನಿಮ್ಮ ಮನೆ ಮತ್ತು ಬಡಾವಣೆಗಳಲ್ಲಿ ಜಾರಿ ಮಾಡಬೇಕು. ಆಗ ನಗರ ಸುಂದರವಾಗುವುದಲ್ಲದೆ ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲ ಡಾ.ಎಚ್.ಎಂ.ನಂಜುಂಡಸ್ವಾಮಿ ಮಾತನಾಡಿ, ನಮ್ಮ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗ 2006ರಿಂದಲೂ ಪ್ರತಿ ವರ್ಷವೂ ತಾಂತ್ರಿಕ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸ್ಪರ್ಧೆಗೆ ರಾಜ್ಯದ ವಿವಿಧ ತಾಂತ್ರಿಕ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಹೊಸ ಆಲೋಚನೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಕ್ಕೆ ಪ್ರೇರಣೆ ನೀಡುವಂತಹ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಎಚ್.ಸಿ.ಚೌಡೇಗೌಡ ಮಾತನಾಡಿದರು. ಉಪ ಪ್ರಾಂಶುಪಾಲ ಡಾ.ವಿನಯ್, ಸಹ ಪ್ರಾಧ್ಯಾಪಕ ಆರ್.ಕೆ.ಕುಮಾರಸ್ವಾಮಿ, ವಿನ್ಯಾಸ- 2024 ಸಂಯೋಜಕಿ ಚೇತನಾ ಇತರರಿದ್ದರು.