ಹಾವೇರಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಾಜ್ಯದ ಪತ್ರಕರ್ತರ ಮಕ್ಕಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜೂ. 30ರಂದು ಹಾವೇರಿ ನಗರದ ಆರ್‌ಟಿಒ ಕಚೇರಿ ಸಮೀಪದ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ಪತ್ರಕರ್ತರು ಅಗತ್ಯ ಸಹಕಾರ ನೀಡಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ ಮಾತನಾಡಿ, ಜಿಲ್ಲೆಗೆ ಮೊದಲ ಬಾರಿಗೆ ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳುವ ಅವಕಾಶ ಸಿಕ್ಕಿದೆ. ನಾವೆಲ್ಲರೂ ಯಶಸ್ವಿಗೊಳಿಸಬೇಕಿದೆ. ಇದಕ್ಕೆ ಪೂರಕವಾಗಿ ಕಾರ್ಯಕ್ರಮದ ಹಲವು ಜವಾಬ್ದಾರಿಗಳನ್ನು ವಿವಿಧ ಸಮಿತಿಗಳನ್ನಾಗಿ ಮಾಡಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ಪತ್ರಕರ್ತರು ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಕೋರಿದರು.
ಇದೇ ವೇಳೆ ಅತಿಥಿಗಳ ಆಯ್ಕೆ, ಕಾರ್ಯಕ್ರಮದ ರೂಪರೇಷೆಗಳು, ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಪತ್ರಕರ್ತರು ಮತ್ತು ಅವರ ಮಕ್ಕಳಿಗೆ ಪೂರಕ ವಸತಿ ವ್ಯವಸ್ಥೆ ಕಲ್ಪಿಸುವುದು, ಅತಿಥಿಗಳ ಸ್ವಾಗತಕ್ಕೆ ವಿವಿಧ ಕಲಾಮೇಳಗಳ ಆಯ್ಕೆ, ಊಟದ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.
ಸಂಘಟನೆಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪರಶುರಾಮ ಸತ್ಯಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರ, ಖಜಾಂಚಿ ನಾರಾಯಣ ಹೆಗಡೆ, ಜಿಲ್ಲಾ ಕಾರ್ಯಕಾರಿ ಸಮಿತಿಯ ಬಸವರಾಜ ಮರಳಿಹಳ್ಳಿ, ಕೇಶವಮೂರ್ತಿ, ವಿನಾಯಕ ಹುದ್ದಾರ, ರವಿ ಹೂಗಾರ, ಸಂತೋಷ ಮಹಾಂತಶೆಟ್ಟರ್, ಶಿವಯೋಗಿ ಮಹಾನುಭಾವಿಮಠ, ಕಿರಣ ಮಾಸಣಗಿ, ಎಸ್.ಟಿ. ವೇದಮೂರ್ತಿ, ಬಸವರಾಜ ಸರೂರು, ತೇಜಸ್ವಿನಿ ಕಾಶೆಟ್ಟಿ, ಸುರೇಶ ನಾಯಕ, ಮಂಜುನಾಥ ಗುಡಿಸಾಗರ, ನಿಂಗಪ್ಪ ಆರೇರ, ಪರಶುರಾಮ ಡೂಗನವರ, ಮಲ್ಲಿಕಾರ್ಜುನ ಕೆಂಚರಡ್ಡೇರ, ಹೊನ್ನಪ್ಪ ಬಾರ್ಕಿ ಇತರರಿದ್ದರು.