ಜಿಲ್ಲೆ

ಹಿರಿಯ ಲೇಖಕ ಸಾತನೂರು ದೇವರಾಜ್ ಅವರ ಸಾಹಿತ್ಯ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣ

ಮೈಸೂರು: ಶ್ರೀನಟರಾಜ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನಿಂದ ನ.27ರಂದು ಹಿರಿಯ ಲೇಖಕ ಸಾತನೂರು ದೇವರಾಜ್ ಅವರ ಸಾಹಿತ್ಯ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣ, ಸಂವಾದ ಹಾಗೂ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಲಿದ್ದು, ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನಟರಾಜ ಪ್ರತಿಷ್ಠಾನದ ವಿಶೇಷ ಅಧಿಕಾರಿ ಪ್ರೊ.ಎಸ್.ಶಿವರಾಜಪ್ಪ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪುಸ್ತಕ ಪ್ರದರ್ಶನ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡುವರು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ.

ವಿಚಾರ ಸಂಕಿರಣದಲ್ಲಿ ಲೇಖಕ ಸಾತನೂರು ದೇವರಾಜ್ ಅವರ ಜೀವಜಗತ್ತಿನ ವಿಸ್ಮಯಗಳು ಕೃತಿಗಳ ಕುರಿತು ವಿದ್ಯಾವರ್ಧಕ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ. ಚಂದ್ರಶೇಖರ್, ಜೈವಿಕ ತಂತ್ರಜ್ಞಾನ ಕೃತಿಗಳನ್ನು ಕುರಿತು ಮೈಸೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ವೈಜ್ಞಾನಿಕಾಧಿಕಾರಿ ಡಾ.ಎಲ್.ಶಶಿಕುಮಾರ್, ಸೃಜನಶೀಲ ಸಾಹಿತ್ಯ ಕುರಿತು ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಡಿ.ಕೆ ಉಷಾ ವಿಚಾರ ಮಂಡಿಸಲಿದ್ದಾರೆ. ಬಳಿಕ ವಿದ್ಯಾರ್ಥಿಗಳು ಲೇಖಕ ಸಾತನೂರು ದೇವರಾಜ್ ಜತೆ ಸಂವಾದ ನಡೆಸುವರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಸಮಾರೋಪ, ಸಂವಾದ ಮತ್ತು ಅಭಿನಂದನಾ ಸಮಾರಂಭ ಜರುಗಲಿದ್ದು, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್‌ಗೌಡ ಅವರು ಸಾತನೂರು ದೇವರಾಜ್ ಅವರನ್ನು ಅಭಿನಂದಿಸಲಿದ್ದಾರೆ. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಸಮಾರೋಪ ಭಾಷಣ ಮಾಡಲಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಪ್ರೊ.ಕೆ.ಟಿ. ವೀರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಾತ್ಸಲ್ಯ ಬಿ.ಇಡಿ. ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ ದಳಪತಿ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.