ಹರಿಹರ: ಎನ್‌ಆರ್‌ಸಿ, ಸಿಎಎಯಂತಹ ಕಾನೂನು ಹಿಡಿದು ದೇಶ ವಾಸಿಗಳಲ್ಲಿ ಭಯ ಮೂಡಿಸಿರುವ ಸರ್ಕಾರಕ್ಕೆ ಸೂಕ್ತ ಉತ್ತರ ನೀಡುವ ಕಾಲ ಬಂದಿದೆ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.
ತಾಲೂಕಿನ ಹನಗವಾಡಿ ಸಮೀಪದ ಮೈತ್ರಿ ವನದ ಪ್ರೊ.ಬಿ. ಕೃಷ್ಣಪ್ಪ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ರಾಜ್ಯಮಟ್ಟದ ಅಧ್ಯಯನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಮನುಷ್ಯತ್ವ ಮರೆತು ಪ್ರಜಾಪ್ರಭುತ್ವ ನಿರ್ನಾಮ ಮಾಡುವಂತ ಕಾನೂನು ತರುವ ಮೂಲಕ ಜನಸಮಾನ್ಯರಲ್ಲಿ ಭಯ ಹುಟ್ಟಿಸುತ್ತಿರುವ ಪುರೋಹಿತ ಶಾಹಿ ಸರ್ಕಾರದ ವಿರುದ್ಧ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದರು.
2023ರ ವಿಧಾನಸಭೆಯ ಚುನಾವಣೆಯಲ್ಲಿ ದಲಿತರ ಜಾಗೃತಿಯಿಂದಾಗಿ ರಾಜಕೀಯ ಬದಲಾವಣೆ ತರಲಾಗಿದೆ. 2024ರ ಲೋಕಸಭಾ ಚುನಾವಣೆ ಎಂಬ ಮಹಾಕದನದಲ್ಲೂ ದಲಿತರು, ಪ್ರಗತಿಪರರು ಒಂದಾಗಿ ದೇಶದಲ್ಲೂ ರಾಜಕೀಯ ಬದಲಾವಣೆ ತರಬೇಕಿದೆ ಎಂದು ಹೇಳಿದರು.
ದೇಶದೆಲ್ಲೆಡೆ ವೈದಿಕಶಾಹಿ ಪ್ರಭುತ್ವ ಸಾಧಿಸುತ್ತಾ, ದಲಿತ, ಶೋಷಿತರಾಗಿರುವ ಬಹುಸಂಖ್ಯಾತರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಆರ್‌ಎಸ್‌ಎಸ್‌ನ ಈ ಸಿದ್ಧಾಂತ ಸೋಲಿಸುವ ಶಕ್ತಿ ದಸಂಸಗಿದೆ ಎಂದರು.
ಬುದ್ಧ, ಬಸವ, ಡಾ.ಅಂಬೇಡ್ಕರ್, ಸಾವಿತ್ರಿಬಾ ಫುಲೆ, ನಾಲ್ವಡಿ, ಕುವೆಂಪು, ಪ್ರೊ.ಬಿ. ಕೃಷ್ಣಪ್ಪರಂತಹ ಮಹನೀಯರು ಇದೇ ವೈದಿಕ ಸಿದ್ಧಾಂತದ ವಿರುದ್ಧ ಧ್ವನಿ ಎತ್ತಿದರು. ಅಂತಹವರ ಧ್ವನಿಯನ್ನು ನಮ್ಮ ಧ್ವನಿಯಾಗಿಸಿ ದಲಿತ ಹೋರಾಟ, ಚಳವಳಿಗಳನ್ನು ರೂಪಿಸಿ ಜಾಗೃತಿ ಮೂಡಿಸಬೇಕಿದೆ ಎಂದರು.
ಸಿಎಂ ಆಪ್ತ ಸಹಾಯಕ ಡಾ.ವೆಂಕಟೇಶ್ ನೆಲ್ಲುಕುಂಟೆ ಮಾತನಾಡಿ, ದಾರ ಧಾರಣೆ ಮಾಡಿದವರು 2300 ವರ್ಷಗಳಿಂದ ಬಹು ಸಂಖ್ಯಾತ ಭಾರತೀಯರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ. ಇದರ ಪರಿಣಾಮವಾಗಿ ದಾರ ಹಾಕಿಕೊಂಡವರಿಗೆ ದೇಶದ ಶಿಕ್ಷಣ, ಸಂಪತ್ತು, ಅಧಿಕಾರ ಸಿಕ್ಕಿತು. ದೇಶದ ಬಹುಸಂಖ್ಯಾತರು ಗುಲಾಮಗಿರಿ, ಜೀತ, ಬಡತನ, ನಿರಕ್ಷರತೆ, ಹಿಂಸೆಯಲ್ಲಿ ಬೆಂದು ಹೋಗಿದ್ದಾರೆಂದರು.
ಬೆಂಗಳೂರಿನ ಜಿನ್ನಿ, ಗೊಲ್ಲಹಳ್ಳಿ ಶಿವಪ್ರಸಾದ್, ಡಿಂಗ್ರಿ ಭರತ್, ದೊಡ್ಮಲೆ ರವಿ ತಂಡದ ಹಾಡುಗಳು ಜನಮನ ಸೆಳದವು.
ಮೈತ್ರಿವನದ ಟ್ರಸ್ಟ್‌ನ ಟ್ರಸ್ಟಿ ರುದ್ರಪ್ಪ ಹನಗವಾಡಿ, ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ, ನಾಗಣ್ಣ ಬಡಿಗೇರ್, ದಸಂಸ ಜಿಲ್ಲಾ ಸಂಚಾಲಕ ಬಿ. ದುಗ್ಗಪ್ಪ, ನಾಗಪ್ಳರ ಮಂಜುನಾಥ, ನಿವೃತ್ತ ಐಎಎಸ್ ಅಧಿಕಾರಿ ಈ. ವೆಂಕಟಯ್ಯ, ನಾಗರಾಜ್ ರಾಚಪ್ಪ, ರಾಯಚೂರಿನ ನಾಗರಾಜ್, ಬೆಂಗಳೂರಿನ ನಿರ್ಮಲ, ಸಂತೋಷ್ ನೋಟದವರ್, ರಾಜನಹಳ್ಳಿ ಮಂಜಪ್ಪ , ಎಂ. ಮಂಜುನಾಥ ಮತ್ತಿತರರಿದ್ದರು.