ವಿಜಯವಾಣಿ ಸುದ್ದಿಜಾಲ ಉಡುಪಿ
ಬಡಜನರಿಗೆ ಆಸರೆಯಾಗಿರುವ ಸಹಕಾರ ಕ್ಷೇತ್ರಕ್ಕೆ ಸೂಕ್ತ ನ್ಯಾಯ ಒದಗಿಸಿ, ಇನ್ನೂ ಉತ್ತಮವಾದ ಭವಿಷ್ಯ ರೂಪಿಸುವ ಕೆಲಸವಾಗಬೇಕಿದೆ. ಸಹಕಾರ ಕ್ಷೇತ್ರ ಉಳಿಸಿ, ಬೆಳೆಸುವಂತಾಗಲು ರಾಜಕೀಯದ ಹೊರತಾಗಿ ಒಳ್ಳೆಯ ಚಿಂತನೆ ಮುಖ್ಯವಾಗುತ್ತದೆ. ಶಾಖೆಗಳಲ್ಲಿ ಠೇವಣಿ, ಸಾಲ ವ್ಯವಹಾರದಲ್ಲಿ ಗುಣಮಟ್ಟದ ಸೇವೆಯೊಂದಿಗೆ ಗ್ರಾಹಕರೊಂದಿಗಿನ ವಿಶ್ವಾಸವೂ ಮುಖ್ಯ ಎಂದು ಶಾಸಕ ಯಶ್ಪಾಲ್ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಲಿಕೋ ಬ್ಯಾಂಕ್ನ ಡೈಮಂಡ್ ಜುಬಿಲಿ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಪತ್ತಿನ ಹಾಗೂ ಇತರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗಾಗಿ ಆಗಸ್ಟ್ 23ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ರಾಜ್ಯ ಸರ್ಕಾರವು ಉದ್ದೇಶಿತ ತಿದ್ದುಪಡಿ, ಠೇವಣಿ ವಿನಿಯೋಗದ ಕುರಿತು ವಿಧೇಯಕ ಜಾರಿಗೆ ಮುಂದಾಗಿದೆ. ಅದು ಬಂದರೆ ಸಹಕಾರ ಕ್ಷೇತ್ರದ ಮೇಲಾಗುವ ಪರಿಣಾಮಗಳ ಕುರಿತಾಗಿ ಚಿಂತನ-ಮಂಥನ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಟೌನ್ ಕೋ-ಆಪರೇಟಿವ್ ಬ್ಯಾಂಕ್ನ ಅಧ್ಯಕ್ಷ ಜಯಪ್ರಕಾಶ ಕೆದ್ಲಾಯ, ಲಿಕೋ ಬ್ಯಾಂಕ್ನ ಅಧ್ಯಕ್ಷ ಕೃಷ್ಣ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಚ್.ಗಂಗಾಧರ ಶೆಟ್ಟಿ, ಶ್ರೀಧರ ಪಿ.ಎಸ್., ಕೆ.ಸುರೇಶ ರಾವ್, ಶಿವಮೊಗ್ಗದ ಸನ್ನದು ಲೆಕ್ಕಪರಿಶೋಧಕ ವರುಣ ಭಟ್ ಉಪಸ್ಥಿತರಿದ್ದರು.
ಸಹಕಾರಿ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವ ರಾವ್ ಹಾಗೂ ಸಿದ್ಧನಗೌಡ ಪಾಟೀಲ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಪ್ನಾ ಪ್ರಾರ್ಥಿಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಸಿಇಒ ಅನೂಷಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.