ವಿಜಯವಾಣಿ ಸುದ್ದಿಜಾಲ ಉಡುಪಿ
ನಬಾರ್ಡ್ನ ಶೇ. 58 ಅನುದಾನ ಕಡಿತದಿಂದಾಗಿ ಕೃಷಿ, ಸಹಕಾರ ಕ್ಷೇತ್ರಕ್ಕೆ ಸಮಸ್ಯೆಯಾಗಲಿದ್ದು ಪರ್ಯಾಯ ವ್ಯವಸ್ಥೆಯ ಚಿಂತನೆಯಾಗಬೇಕಿದೆ. ಸಹಕಾರ ಕಾಯಿದೆ ತಿದ್ದುಪಡಿ ಗೊಂದಲ, ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳ ಗ್ರಾಮೀಣ ಶಾಖೆಗಳೂ ಈಗ ಪೈಪೋಟಿ ನೀಡತೊಡಗಿದ್ದು, ಸಹಕಾರಿಗಳ ಜವಾಬ್ದಾರಿ ಹೆಚ್ಚಿದೆ. ಗ್ರಾಹಕರು ಪಡೆದ ಸಾಲ ಸಕಾಲಕ್ಕೆ ತೀರಿಸುವ ಪ್ರವೃತ್ತಿ ಬೆಳೆಸಿಕೊಂಡರೆ ಸಹಕಾರ ಕ್ಷೇತ್ರ ಇನ್ನಷ್ಟು ಯಶಸ್ವಿಯಾಗಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ ಅಭಿಮತ ವ್ಯಕ್ತಪಡಿಸಿದರು.
ರಾಜ್ಯ ಸಹಕಾರ ಮಹಾಮಂಡಳದ ನಾಮ ನಿರ್ದೇಶಿತ ನಿರ್ದೇಶಕ ಎನ್.ಗಂಗಣ್ಣ ಮಾತನಾಡಿ, ಶೋಷಣೆಮುಕ್ತ ಸಮಾಜ ನಿರ್ಮಾಣ ಇಂದಿನ ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ನಿರುದ್ಯೋಗಿಗಳಿಗೆ ಸ್ವಂತ ಉದ್ಯಮ ಆರಂಭಿಸಲು ಸಹಕಾರ ಸಂಘಗಳಿಂದ ಬಂಡವಾಳ ಒದಗಿಸುವ ಕೆಲಸವಾಗಬೇಕಿದೆ ಎಂದರು.
ಸಹಕಾರ ಮಹಾಮಂಡಳದ ನಿರ್ದೇಶಕ ರಾಮ ರೆಡ್ಡಿ, ಶಿವಪ್ರಸಾದ್, ವೃತ್ತಿಪರ ನಿರ್ದೇಶಕಿ ಕೆ.ಸಿ. ನಾಗರತ್ನಾ, ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್. ಲಾವಣ್ಯಾ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ, ಯೂನಿಯನ್ ಉಪಾಧ್ಯಕ್ಷ ಅಶೋಕಕುಮಾರ್ ಬಲ್ಲಾಳ್, ನಿರ್ದೇಶಕರಾದ ಎಚ್.ಗಂಗಾಧರ ಶೆಟ್ಟಿ, ಸುಧೀರ್ ವೈ., ಪ್ರದೀಪ್ ಯಡಿಯಾಲ್, ಕರುಣಾಕರ್ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ಅರುಣಕುಮಾರ್ ಹೆಗ್ಡೆ, ಕೊಡಗು ಜಿಲ್ಲಾ ಸಹಕಾರ ಇಲಾಖೆಯ ಜಂಟಿ ನಿರ್ದೇಶಕ ಪ್ರವೀಣ್ ನಾಯಕ್ ಉಪಸ್ಥಿತರಿದ್ದರು.
ಸಹಕಾರ ಚರ್ಚಾ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲಾ ಮಟ್ಟದಲ್ಲಿ ಪ್ರಥಮ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ದಿವ್ಯಾ ಅವರನ್ನು ಸನ್ಮಾನಿಸಲಾಯಿತು.
ಸದಾನಂದ ಆಚಾರ್ಯ ಪ್ರಾರ್ಥಿಸಿದರು. ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೂಷಾ ಕೋಟ್ಯಾನ್ ಸ್ವಾಗತಿಸಿದರು.
ಸಹಕಾರ ರಂಗಕ್ಕೂ ಸೈಬರ್ ಕ್ರೈಂ ಕಾಲಿಟ್ಟಿದ್ದು ಖಾತೆಗಳಲ್ಲಿರುವ ದುಡ್ಡಿಗೆ ಭದ್ರತೆ ಅತ್ಯಗತ್ಯವಾಗಿದೆ. ಗ್ರಾಹಕರೂ ಸಹ ಈ ವಿಚಾರವಾಗಿ ಸದಾ ಜಾಗೃತರಾಗಿರಬೇಕು. ಬ್ಯಾಂಕ್ಗಳಲ್ಲಿ ದರೋಡೆ ಪ್ರಕರಣವೂ ಹೆಚ್ಚುತ್ತಿದ್ದು, ಎಲ್ಲ ಸಹಕಾರ ಸಂಸ್ಥೆಗಳು ಸಿಸಿಟಿವಿ, ಸೈರನ್, ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು. | ಬಿ.ಸಿ. ಲೋಕಪ್ಪ ಗೌಡ. ಕ.ರಾ.ಸ.ಮ. ನಿರ್ದೇಶಕ