ಮೈಸೂರು: ಮೈಸೂರು ವಿವೇಕಾನಂದ ಯೋಗ ಫೌಂಡೇಷನ್, ಮೈಸೂರು ಯೋಗ ಒಕ್ಕೂಟ ವತಿಯಿಂದ ನಗರದ ಮೈಸೂರು ವಿಶ್ವ ವಿದ್ಯಾಲಯದ ಯೋಗ ಭವನದಲ್ಲಿ ಭಾನುವಾರ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿತ್ತು.
ಮೈಸೂರು, ಮಂಡ್ಯ, ಚಾಮರಾಜನಗರ, ಗದಗ, ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಸ್ಫರ್ದಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯು 8 ವರ್ಷಕ್ಕಿಂತ ಒಳಗಿನವರು, 8 ರಿಂದ 10 ವರ್ಷ, 11 ರಿಂದ 14 ವರ್ಷ, 15 ರಿಂದ 20 ವರ್ಷ, 21 ರಿಂದ 30 ವರ್ಷ, 31 ರಿಂದ 40 ವರ್ಷ, 41 ರಿಂದ 50 ವರ್ಷ ಹಾಗೂ 50 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿ ವಿಭಾಗದಲ್ಲೂ ಬಾಲಕ, ಬಾಲಕಿ, ಯುವಕ, ಯುವತಿ ಹಾಗೂ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು. ಸೋಲೋ ಆರ್ಟಿಸ್ಟಿಕ್ ಯೋಗಾಸನ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಿತು.
ಮೈಸೂರು ಯೋಗ ಒಕ್ಕೂಟ ಅಧ್ಯಕ್ಷ ಶ್ರೀಹರಿ ಮಾತನಾಡಿ, ಬಲಿಷ್ಠ ಭಾರತಕ್ಕಾಗಿ ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಬೇಕು. ಹಿಂದೆ ಹರಿದ್ವಾರ ಅಥವಾ ಋಷಿಕೇಶವನ್ನು ಯೋಗದ ರಾಜಧಾನಿ ಎನ್ನಲಾಗುತ್ತಿತ್ತು. ಆದರೆ ಈಗಾ ಮೈಸೂರನ್ನು ಯೋಗದ ರಾಜಧಾನಿ ಎನ್ನಲಾಗುತ್ತಿದೆ. ಯೋಗ ಕ್ಷೇತ್ರ ಇಂದು ದೊಡ್ಡಮಟ್ಟದಲ್ಲಿ ಬೆಳೆದಿದೆ. ಅಂತಾರಾಷ್ಟ್ರೀಯ ಯೋಗದಿನದಂದು ಮೈಸೂರಿನಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನ ಗೆನ್ನಿಸ್ ದಾಖಲೆ ನಿರ್ಮಿಸಿದೆ. ಇದರ ಜತೆಗೆ ಮತ್ತೊಂದು ಮುಕುಟ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗದಿನದಲ್ಲಿ ಪಾಲ್ಗೊಂಡು ಈ ನೆಲೆದ ಹೆಮ್ಮೆ ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎ. ಶಶಿರೇಖಾ ಮಾತನಾಡಿ, ದೈನಂದಿನ ಜೀವನದಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಸುಸ್ಥಿರತೆಗೆ ಯೋಗ ಅಡಿಪಾಯವಾಗಿದೆ. ಯೋಗದ ಮೊರೆ ಹೋದವರು ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದಾರೆ ಎಂದರು.
ಯೋಗಗುರು ಡಾ.ಗಣೇಶ್ ಕುಮಾರ್ ಮಾತನಾಡಿ, ಮೈಸೂರು ಅರಸರು ಯೋಗಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಆ ಪರಂಪರೆಯನ್ನು ನಾವು ಮತ್ತಷ್ಟು ಹೆಚ್ಚಿಸಬೇಕಿದೆ. ಒಲಂಪಿಕ್ಸ್‌ನಲ್ಲಿ ಯೋಗವನ್ನು ಒಂದು ಕ್ರೀಡೆಯಯಾಗಿ ಸೇರ್ಪಡೆ ಮಾಡಲಾಗಿದೆ. ಇದರ ಜತೆಗೆ 2036ಕ್ಕೆ ಭಾರತದಲ್ಲಿ ಒಲಂಪಿಕ್ಸ್ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಇದರಲ್ಲಿ ನಮ್ಮ ಯೋಗ ಪಟುಗಳು ಪಾಲ್ಗೊಂಡು ದೇಶದ ಕೀರ್ತಿ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಿದೆ ಎಂದು ಸಲಹೆ ನೀಡಿದರು.
ಮಂಡ್ಯ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ಕೋಪ ತಾಪದಿಂದ ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೈದಿಗಳು ಜೈಲಿನಲ್ಲಿ ಬಂಧಿಯಾಗಿದ್ದಾರೆ. ನಮ್ಮಲ್ಲಿ ಅಂಥವರಿಗೆ ನಿತ್ಯ ಯೋಗಭ್ಯಾಸ ಮಾಡಿಸಲಾಗುತ್ತಿದೆ. ಇದರಿಂದ ಅವರಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ನಿಟ್ಟಿನಲ್ಲಿ ಯೋಗ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.
ಈ ಸಂದರ್ಭ ಯೋಗಗುರು ಡಾ.ಗಣೇಶ್ ಕುಮಾರ್ ಹಾಗೂ ಡಾ.ಎಚ್.ಎ.ಶಶಿರೇಖಾ ಅವರಿಗೆ ಶಿಷ್ಯರಿಂದ ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ವೆಂಕಟೇಶ, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಡಾ.ಚಂದ್ರಶೇಖರ್, ಅಧ್ಯಕ್ಷ ಟಿ.ಜಲೇಂದ್ರ ಕುಮಾರ್, ಯೋಗ ಫೆಡರೇಷನ್ ಆಫ್ ಮೈಸೂರಿನ ಕಾರ್ಯದರ್ಶಿ ಶಶಿಕುಮಾರ್, ಯೋಗ ಸ್ಪೋರ್ಟ್ಸ್ ಫೌಂಡೇಷನ್ ಖಜಾಂಚಿ ಎಂ.ಎನ್.ಮೋಹನ್, ರಾಜ್ಯ ಅಮೆಚೂರ್ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಗಿರೀಶ್, ಕಾರ್ಯದರ್ಶಿ ಎ.ನಟರಾಜು, ಬಸವಮಾರ್ಗ ಸಂಸ್ಥೆಯ ಎಸ್.ರಾಜು, ಯೋಗ ಗುರುಗಳಾದ ಗೀತಾ ಕುಮಾರ್, ಪ್ರೇಮ್ ಕುಮಾರ್ ಹಾಗೂ ಇತರರು ಇದ್ದರು.