ಜಿಲ್ಲೆ

ಗಮನ ಸೆಳೆದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

ಮಡಿಕೇರಿ: ಭಾಗಮಂಡಲದಲ್ಲಿ ನಡೆದ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ ನೋಡುಗರನ್ನು ರಂಜಿಸಿತು. ಓಟ, ಹಗ್ಗಜಗ್ಗಾಟ ಸೇರಿದಂತೆ ವಿಶಾಲವಾದ ಗದ್ದೆಯಲ್ಲಿ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ, ನೆಹರೂ ಯುವ ಕೇಂದ್ರ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಯುವ ಒಕ್ಕೂಟ ಹಾಗೂ ಶ್ರೀ ಕೃಷ್ಣ ಯುವಕ ಸಂಘ, ಭಾಗಮಂಡಲ ಇದರ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಬಳ್ಳಡ್ಕ ಅಪ್ಪಾಜಿ ಹಾಗೂ ಮನುರವರ ಗದ್ದೆಯಲ್ಲಿ ೩೩ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಕ್ರೀಡೆಯ ತವರೂರಾಗಿ ಜಿಲ್ಲೆ ರಾಷ್ಟದಲ್ಲೇ ಗುರುತಿಸಿಕೊಂಡಿದ್ದು, ವಿವಿಧ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕ್ರೀಡಾಪಟುವನ್ನು ಕೊಡುಗೆಯಾಗಿ ನೀಡಿದೆ. ಕಗ್ಗೋಡ್ಲುವಿನಲ್ಲಿ ಪರಿಚಯಗೊಂಡು ರಾಷ್ಟಮಟ್ಟದಲ್ಲಿಯೇ ಹೆಸರುಗಳಿಸಿರುವ ಕೆಸರುಗದ್ದೆ ಕ್ರೀಡಾಕೂಟ ಇಂದು ನಾಡಿನೆಲ್ಲೆಡೆ ಪಸರಿಸುವುದರ ಮೂಲಕ, ಕಾವೇರಿ ತಾಯಿಯ ಉಗಮ ಸ್ಥಾನ ಭಾಗಮಂಡಲದಲ್ಲಿ ನಡೆಯುತ್ತಿರುವುದು ಸಂತೋಷಕರ ವಿಚಾರವಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯ ಮೂಲೆ, ಮೂಲೆಗಳಲ್ಲಿಯೂ ಇಂತಹ ಕ್ರೀಡಾಕೂಟ ನಡೆಸುವುದರ ಮೂಲಕ, ಗ್ರಾಮದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವಂತಾಗಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿದ್ದ ಭಾಗಮಂಡಲ ಗ್ರಾ.ಪಂ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮಾತನಾಡಿ, ರಾಜ್ಯಮಟ್ಟದ ಕ್ರೀಡಾಕೂಟ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾಗಮಂಡಲ ಗ್ರಾ.ಪಂ ಅಧ್ಯಕ್ಷ ಕಾಳನ ರವಿ ವಹಿಸಿದ್ದರು. ವೇದಿಕೆಯಲ್ಲಿ ಅಯ್ಯಂಗೇರಿ ಗ್ರಾ.ಪಂ ಅಧ್ಯಕ್ಷೆ ಎಚ್.ಜಿ.ಪುಷ್ಪ, ಮಡಿಕೇರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್‌ದಾಸ್, ನೆಹರೂ ಯುವ ಕೇಂದ್ರದ ಯುವ ಸಮನ್ವಯ ಅಧಿಕಾರಿ ಉಲ್ಲಾಸ್, ಕೆಟಿಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್‌ಕುಮಾರ್, ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕುಂಜಿಲನ ಮಧು ಮೋಹನ್, ಭಾಗಮಂಡಲ ಶ್ರೀಕೃಷ್ಣ ಯುವಕ ಸಂಘದ ಅಧ್ಯಕ್ಷ ಲತೇಶ್, ಕ್ರೀಡಾ ಸಮಿತಿ ಸಂಚಾಲಕ ಕಾವೇರಿಮನೆ ಭರತ್, ಗದ್ದೆಯ ಮಾಲೀಕರಾದ ಬಳ್ಳಡ್ಕ ಅಪ್ಪಾಜಿ ಹಾಗೂ ಮನು ಉಪಸ್ಥಿತರಿದ್ದರು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಯುವ ಒಕ್ಕೂಟದ ಸದಸ್ಯ ನವೀನ್ ದೇರಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕೆಸರುಗದ್ದೆ ಕ್ರೀಡಾಕೂಟದಲ್ಲಿ ಜಿಲ್ಲೆ ಸೇರಿದಂತೆ ಉಡುಪಿ, ಮಂಗಳೂರು, ಸುಳ್ಯ, ಪುತ್ತೂರು, ಬೆಂಗಳೂರು ಕಡೆಗಳಿಂದ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.