ಮೈಸೂರು: ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್, ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ 42ನೇ ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ನಗರದ ಓವಲ್ ಮೈದಾನದಲ್ಲಿ ಶನಿವಾರ ಚಾಲನೆ ದೊರೆಯಿತು.
ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಿಂದ ದೈಹಿಕ ಆರೋಗ್ಯ ವೃದ್ಧಿಯಾಗುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಓವಲ್ ಮೈದಾನಕ್ಕೆ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಸಾಕಷ್ಟು ಕ್ರೀಡಾಪಟುಗಳು ಆಗಮಿಸುತ್ತಾರೆ. ಆದರೆ, ಮೈದಾನದಲ್ಲಿ ದೀಪ ಹಾಗೂ ಶೌಚಾಗೃಹದ ಕೊರತೆ ಇದ್ದು, ನಗರಪಾಲಿಕೆ ವತಿಯಿಂದ ಅಗತ್ಯ ಕ್ರಮ ವಹಿಸಬೇಕು ಎಂದು ಶಾಸಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮೇಯರ್ ಶಿವಕುಮಾರ್, ಸೂಕ್ತ ಕ್ರಮದ ಭರವಸೆ ನೀಡಿದರು.
ಮೇಯರ್ ಶಿವಕುಮಾರ್, ಮಾಜಿ ಶಾಸಕ ವಾಸು, ಪತ್ರಕರ್ತರಾದ ಅಂಶಿ ಪ್ರಸನ್ನ ಕುಮಾರ್, ರವೀಂದ್ರ ಭಟ್, ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡೇವಿಡ್ ಪ್ರೇಮನಾಥ್, ಕಾರ್ಯದರ್ಶಿ ಎಚ್.ಸಿ. ಷಣ್ಮುಗಂ, ಜಿಲ್ಲಾಧ್ಯಕ್ಷೆ ಸುಮನಾ ನರಸಿಂಹಮೂರ್ತಿ, ಮೈಸೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ. ಕೃಷ್ಣಯ್ಯ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತೆ ಶ್ರುತಿ ಇದ್ದರು.