ನಾಗಮಂಗಲ: ಆದಿಚುಂಚನಗಿರಿಯ ಬಿಜಿಎಸ್ ಕ್ರೀಡಾಂಗಣದಲ್ಲಿ ಆ.13ರಂದು 33ನೇ ರಾಜ್ಯಮಟ್ಟದ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಅಂತೆಯೇ ಅದಕ್ಕೆ ತಕ್ಕಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಹೇಳಿದರು.
ತಾಲೂಕಿನ ಆದಿಚುಂಚನಗಿರಿಯ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಹಾಗೂ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆಯಿಂದ 250ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ಅಂದು ಬೆಳಗ್ಗೆ 9 ಗಂಟೆಗೆ ನೋಂದಣಿ ಪ್ರಾರಂಭವಾಗಲಿದ್ದು, ಉತ್ಸವದಲ್ಲಿ ಕಲಾ ತಂಡಗಳು ಭಾಗವಹಿಸಿ ವಿಶೇಷ ಮೇರಗು ನೀಡಲಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುವ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು. ಗಾಳಿಪಟ ಸಿದ್ಧಪಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಲಿದೆ. ವಸತಿ, ಊಟದ ವ್ಯವಸ್ಥೆ, ವಾಹನ ನಿಲುಗಡೆ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆಯು ವ್ಯವಸ್ಥಿತವಾಗಿ ಮಾಡಲಾಗಿದೆ ಎಂದರು.
ಜಾನಪದ ಪರಿಷತ್ ಜಿಲ್ಲಾದ್ಯಕ್ಷ ಡಿ.ಪಿ.ಸ್ವಾಮಿ ಮಾತನಾಡಿ, ಗಾಳಿಪಟ ನಮ್ಮ ಸಂಸ್ಕೃತಿಯ ಒಂದು ಭಾಗ. ಇದನ್ನು ಮಕ್ಕಳು ಹಾಗೂ ಯುವ ಪೀಳಿಗೆಗೆ ಪರಿಚಯಿಸಿ ಉಳಿಸಬೇಕಾಗಿದೆ. ಉತ್ಸವದಲ್ಲಿ ವೈವಿದ್ಯಮಯ ಹಾಗೂ ಸಮಾಜಿಕ ಕಳಕಳಿಯ ಸಂದೇಶ ಸಾರುವ ಗಾಳಿಪಟಗಳನ್ನು ಹಾರಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಾನಪದ ಲೋಕದ ಕ್ಯೂರೇಟರ್ ಡಾ.ರವಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಸಿಪಿಐ ನಿರಂಜನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.
ಗಾಳಿಪಟ ಉತ್ಸವದ ಸ್ವರೂಪ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಸಹಯೋಗದೊಂದಿಗೆ ಆಯೋಜಿಸಿರುವ ಗಾಳಿಪಟ ಉತ್ಸವ 13ರಂದು ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ.
ಕಿರಿಯರ ವಿಭಾಗದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಪ್ರತ್ಯೇಕವಾಗಿ 14 ವರ್ಷದೊಳಗೆ ಹಾಗೂ ಹಿರಿಯರ ವಿಭಾಗ ಗಂಡು ಮತ್ತು ಹೆಣ್ಣು ಮಕ್ಕಳು ಪ್ರತ್ಯೇಕವಾಗಿ 15 ರಿಂದ 20 ವರ್ಷದವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ ಹಾಗೂ ತೃತೀಯ ನಗದು ಬಹುಮಾನ ಮತ್ತು ಪ್ರತಿ ವಿಭಾಗಕ್ಕೂ ಎರಡೆರಡು ಸಮಾಧಾನಕರ ಬಹುಮಾನಗಳಿರುತ್ತವೆ.(ಅತ್ಯುತ್ತಮ ಸಂದೇಶ, ಸುಂದರ ಗಾಳಿಪಟಕ್ಕೆ ನಾಡೋಜ ಡಾ.ಎಚ್.ಎಲ್.ನಾಗೇಗೌಡ ಅವರ ಹೆಸರಿನಲ್ಲಿ ಪಾರಿತೋಷಕ ನೀಡಲಾಗುವುದು.)
ಪ್ರವೇಶ ಉಚಿತವಾಗಿದ್ದು, ಭಾಗವಹಿಸುವವರು ಆ.13ರಂದು ಬೆಳಗ್ಗೆ 9 ಗಂಟೆ ಒಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪಟಗಳನ್ನು ಹಾರಿಸುವವರು ಇನ್ನೊಬ್ಬರ ದಾರಗಳನ್ನು ಕತ್ತರಿಸುವಂತಹ ಮಾಂಜ ದಾರಗಳನ್ನು ಬಳಸುವಂತಿಲ್ಲ. ಗಾಳಿಪಟ ಸ್ಪರ್ಧೆಗೆ ಹಾರಿಸಲು 30 ನಿಮಿಷ ಕಾಲಾವಕಾಶವಿದೆ. ಮಾಹಿತಿಗಾಗಿ ದೂ.ಸಂ 080-23605033 ಅಥವಾ ಮೊ.ಸಂ 7795632294 ಮತ್ತು 9844477960 ಯನ್ನು ಸಂಪರ್ಕಿಸಬಹುದಾಗಿದೆ.