ಮಂಡ್ಯ: ಗಲ್ಲಿ ಗಲ್ಲಿಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದರೆ ಸಾಲದು. ಬದಲಿಗೆ ನಮ್ಮ ನೆಲದಲ್ಲಿ ಪ್ರತಿಯೊಬ್ಬರೂ ಆಂಗ್ಲ ಭಾಷೆಗಿಂತ ಹೆಚ್ಚು ಕನ್ನಡವನ್ನೇ ಬಳಕೆ ಮಾಡಬೇಕು ಎಂದು ಬಿಜೆಪಿ ಮಾಜಿ ನಗರಾಧ್ಯಕ್ಷ ಎಚ್.ಆರ್. ಅರವಿಂದ್ ಹೇಳಿದರು.
ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ವತಿಯಿಂದ ಆಯೋಜಿಸಿದ್ದ 30ನೇ ರಾಜ್ಯ ಮಟ್ಟದ ಕವಿ-ಕಾವ್ಯ ಮೇಳ, 68ನೇ ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಕ್ಷೇತ್ರದ ಗಣ್ಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ತಮಿಳುನಾಡಿನಲ್ಲಿ ಎಲ್ಲರೂ ತಮಿಳು ಭಾಷೆಯನ್ನೇ ಉಪಯೋಗಿಸುತ್ತಾರೆ. ಮಹಾರಾಷ್ಟ್ರದಲ್ಲಿ ಮರಾಠಿ, ಆಂಧ್ರದಲ್ಲಿ ತೆಲುಗು, ಕೇರಳದಲ್ಲಿ ಮಲೆಯಾಳಿ ಹಾಗೂ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಭಾಷೆಯನ್ನು ಮಾತ್ರ ಬಳಸುತ್ತಾರೆ. ಆದರೆ ನಾವು ಕನ್ನಡದ ಮಧ್ಯದಲ್ಲಿ ಆಂಗ್ಲ ಭಾಷಾ ಪದಗಳನ್ನು ಹೆಚ್ಚಾಗಿ ಉಪಯೋಗಿಸುತ್ತೇವೆ. ಇದರಿಂದ ಕನ್ನಡ ಪದಗಳು ನಶಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಆರ್.ಚಂದ್ರಶೇಖರ್, ಸಹಕಾರ ರತ್ನ ಪುರಸ್ಕೃತ ಕೀಲಾರಕೃಷ್ಣ, ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಉಪಾಧ್ಯಕ್ಷೆ ಮಂಜುಳಾ, ಕಾರ್ಯದರ್ಶಿ ಸುಜಾತಾಕೃಷ್ಣ, ಸಂಘಟನಾ ಕಾರ್ಯದರ್ಶಿ ಸುಧಾ ಆರಾಧ್ಯ, ಹಾವೇರಿ ಜಿಲ್ಲಾಧ್ಯಕ್ಷ ನಾಗರಾಜು, ಸಾಹಿತಿ ಎಂ.ಯು.ಶ್ವೇತಾ, ಲೇಖಕಿ ಮಧುರಾ, ಪ್ರಾಧ್ಯಾಪಕ ಜಯಕುಮಾರ್ ಇತರರಿದ್ದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.