ಬ್ಯಾಡಗಿ: ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಕನಕದಾಸರ ಜಯಂತ್ಯುತ್ಸವವನ್ನು ಕನಕದಾಸರ ಕರ್ಮಭೂಮಿ ಕಾಗಿನೆಲೆ ಗುರುಪೀಠದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಕಾಗಿನೆಲೆ ಕನಕಗುರುಪೀಠದಲ್ಲಿ ಬುಧವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಹಾಗೂ ರಾಷ್ಟ್ರಮಟ್ಟದ ಶೇಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಂತ ಕನಕದಾಸರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡು ಎಲ್ಲ ಸಮಾಜಗಳ ಒಳಿತಿಗಾಗಿ ಶ್ರಮಿಸಿದ್ದಾರೆ. ನಾವೆಲ್ಲರೂ ಅವರ ಆದರ್ಶ ಮೈಗೂಡಿಸಿಕೊಂಡು, ಜಯಂತಿಗೆ ನೈಜ ಅರ್ಥ ತರಬೇಕಿದೆ. ಜಯಂತ್ಯುತ್ಸವವನ್ನು ಉತ್ಸವ, ಮೆರವಣಿಗೆಗೆ ಸೀಮಿತಗೊಳಿಸದೆ, ಧ್ಯೇಯ ಒಗ್ಗೂಡಿಸಿಕೊಂಡು ಸಮಾಜವನ್ನು ಉನ್ನತಿಗೆ ಒಯ್ಯಬೇಕಿದೆ ಎಂದರು.
ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ, ಅ. 3ರಂದು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಶೇಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಮಾವೇಶ ನಡೆಯಲಿದೆ. 2014ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿಸಿದ ಸಂಘಟನೆಯ ಎರಡನೇ ಸಮಾವೇಶ ರಾಜ್ಯದಲ್ಲಿ ನಡೆಯಲಿದೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀನಿರಂಜನಾನಂದಪುರಿ ಸ್ವಾಮೀಜಿ ವಹಿಸುವರು ಎಂದರು.
ಮಾಜಿ ಸಚಿವ ಎಚ್. ವಿಶ್ವನಾಥ ಮಾತನಾಡಿ, ಭವಿಷ್ಯದಲ್ಲಿ ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ಕಾಗಿನೆಲೆ ಮಠ ಬೆಳೆದು ನಿಂತಿದೆ. ಸಮಾಜಕ್ಕೆ ನನ್ನ ಸೇವೆ ಮಾಡಲು ಬದ್ಧನಾಗಿರುವೆ ಎಂದರು.
ಸಭೆಯಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಶಾಸಕ ಬಸವರಾಜ ಶಿವಣ್ಣನವರ, ಕುರುಬ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಹರಿಹರ, ಎಸ್‌ಎಫ್‌ಎನ್ ಗಾಜೀಗೌಡ್ರ, ಶಂಕ್ರಪ್ಪ ಮಾತನವರ, ಸಿದ್ದಪ್ಪ ನಿಂಗಮ್ಮನವರ, ಸುಜಾತಮ್ಮ ಹಾಲಸಿದ್ದಪ್ಪ, ಮೃತ್ಯುಂಜಯ ಗುದಿಗೇರ, ಚಂದ್ರಶೇಕರ ಮುದಕಣ್ಣವರ ಇತರರಿದ್ದರು.