ಉರ್ವ ಮೈದಾನದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ದೈವಜ್ಞ ಯೂನಿಟಿ ಕಪ್-2025ರ ಸಭಾ ಕಾರ‌್ಯಕ್ರಮವನ್ನು ಕ್ರಿಕೆಟಿಗ ಶಿವಪ್ರಸಾದ ಮಂಜುನಾಥ್ ಶೇಟ್ ಉದ್ಘಾಟಿಸಿದರು. 
ಜಿಲ್ಲೆ

ಕ್ರೀಡೆಯಿಂದ ಸಾಮಾಜಿಕವಾಗಿ ಒಗ್ಗೂಡಲು ಸಾಧ್ಯ

Mangaluru - Shravan Kumar Nala

ಮಂಗಳೂರು: ಕ್ರೀಡೆಯಿಂದ ಸಾಮಾಜಿಕವಾಗಿ ಒಗ್ಗೂಡಲು ಸಾಧ್ಯವಿದ್ದು, ಆತ್ಮವಿಶ್ವಾಸ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಕ್ರೀಡೆಗಳು ಸಹಕಾರಿ. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಮೂಲಕ ದೈವಜ್ಞ ಸಮಾಜವನ್ನು ಒಟ್ಟುಗೂಡಿಸು ಪ್ರಯತ್ನ ಶ್ಲಾಘನೀಯ ಎಂದು ಮಾಜಿ ಕ್ರಿಕೆಟ್ ಆಟಗಾರ ಮತ್ತು ಬೆಂಗಳೂರಿನ ವಾಣಿಜ್ಯೋದ್ಯಮಿ ಶಿವಪ್ರಸಾದ ಮಂಜುನಾಥ್ ಶೇಟ್ ಹೇಳಿದರು.

ಮಂಗಳೂರಿನ ಉರ್ವ ಮೈದಾನದಲ್ಲಿ ಬುಧವಾರ ಎಸ್.ಎಲ್ ಶೇಟ್, ಎಂ ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇವರ ಪ್ರಾಯೋಜಕತ್ವದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಸಂಘಟನೆ ಮತ್ತು ಶ್ರೇಯೋಭಿವೃದ್ಧಿಗಾಗಿ ಪ್ರಥಮ ಆವೃತ್ತಿಯ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ದೈವಜ್ಞ ಯೂನಿಟಿ ಕಪ್-2025 ಇದರ ಸಭಾ ಕಾರ‌್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ರೀಡೆಯಿಂದ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುವುದು ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಯು ಪ್ರಮುಖ ಕಾರಣ. ಕ್ರೀಡಾಕೂಟವು ಗುರಿಯನ್ನು ನಿಶ್ಚಯ ಮಾಡುವ ಪಾಠ. ಕ್ರೀಡೆಯು ಆತ್ಮವಿಶ್ವಾಸ ಮತ್ತು ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಸಹಕಾರಿ ಆಗಿದ್ದು, ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಯ ಮೂಲವಾಗಿದೆ ಎಂದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮಂಗಳೂರು ವಲಯದ ಚೇರ್‌ಮನ್ ಮನೋಹರ್ ಅಮೀನ್ ಮಾತನಾಡಿ, ಉರ್ವದ ಕ್ರಿಕೆಟ್ ಮೈದಾನ ಬಹಳ ವರ್ಷಗಳಿಂದ ಕ್ರಿಕೆಟ್ ಪಟುಗಳಿಗೆ ಉತ್ತಮವಾದ ವೇದಿಕೆಯಾಗುತ್ತಿದೆ. ಸಾಕಷ್ಟು ಕ್ರಿಕೆಟ್ ಪಂದ್ಯಾಟದ ಮೂಲಕ ಉತ್ತಮ ಕ್ರಿಕೆಟ್ ಆಟಗಾರರು ಹೊರಬರುತ್ತಿದ್ದಾರೆ. ದೈವಜ್ಞ ಯೂನಿಟಿ ಕಪ್-2025ನಿಂದ ಮತ್ತಷ್ಟು ಆಟಗಾರರು ಹೊರಬರಲಿ ಎಂದು ಶುಭಹಾರೈಸಿದರು. ಈ ಸಂದರ್ಭ ಅವರು ಆರ್‌ಸಿಬಿ ತಂಡದ ಹಸ್ತಾಕ್ಷರ ಇರುವ ಬ್ಯಾಟ್‌ವನ್ನು ಎಸ್.ಎಲ್ ಶೇಟ್, ಎಂ ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ಗೆ ನೀಡಿದರು.

ಎಸ್.ಎಲ್ ಶೇಟ್, ಎಂ ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಪದ್ಮ ಆರ್ ಶೇಟ್ ಧ್ವಜಾರೋಹಣ ಮಾಡುವ ಮೂಲಕ ಹಾಗೂ ರೋಲಿಂಗ್ ಟ್ರೋಫಿಗಳನ್ನು ಉದ್ಘಾಟಿಸುವ ಮೂಲಕ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ದೈವಜ್ಞ ಯೂನಿಟಿ ಕಪ್-2025ಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಎಂ.ಆರ್.ಎಂಟರ್‌ಟೈನ್‌ಮೆಂಟ್‌ನ ಸುಜೀತ್ ರಾಯ್ಕರ್, ರಾಕಾ ಪ್ರಶಾಂತ್ ಶೇಟ್, ಎಸ್.ಎಲ್ ಶೇಟ್, ಎಂ ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಎಂ.ಹೇಮಂತ್ ಶೇಟ್, ಎಂ.ನಿಶಾಂತ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.

ಎಸ್.ಎಲ್ ಶೇಟ್, ಎಂ ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿವಪ್ರಸಾದ ಮಂಜುನಾಥ್ ಶೇಟ್ ಅವರನ್ನು ಗೌರವಿಸಲಾಯಿತು.

ಎಸ್.ಎಲ್ ಶೇಟ್, ಎಂ ರಘುನಾಥ ಶೇಟ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನ ಆಡಳಿತ ಸಮಿತಿ ಅಧ್ಯಕ್ಷ ಎಂ.ಪ್ರಶಾಂತ್ ಶೇಟ್ ಸ್ವಾಗತಿಸಿದರು. ವೀಣಾ ಪ್ರಾರ್ಥಿಸಿದರು. ಸುಧಾಕರ ರಾವ್ ಪೇಜಾವರ ಕಾರ‌್ಯಕ್ರಮ ನಿರೂಪಿಸಿದರು.

ಮೂರು ದಿನಗಳ ಕ್ರಿಕೆಟ್ ಪಂದ್ಯಾಟದಲ್ಲಿ 12 ಜಿಲ್ಲೆಗಳಿಂದ ದೈವಜ್ಞ ಸಮಾಜದ 22 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದೆ.

---------------------

ಎಸ್‌ಎಲ್ ಶೇಟ್ ದೈವಜ್ಞ ಸಮಾಜ ಬ್ರಾಂಡ್ ಅಂಬಾಸೀಡರ್

ಸಮಾಜವನ್ನು ಒಟ್ಟುಗೂಡಿಸಿ ಇಂತಹ ಪಂದ್ಯಾಟವನ್ನು ಆಯೋಜಿಸುವ ಕನಸು ಬಹಳಷ್ಟು ಮಂದಿಗೆ ಇರುತ್ತದೆ ಆದರೆ ಅದನ್ನು ಸಕಾರರೂಪಕ್ಕೆ ತರುವ ಶಕ್ತಿ ಕೆಲವರಿಗೆ ಮಾತ್ರ ಸಿದ್ಧಿಸುತ್ತದೆ. ಕ್ರಿಕೆಟ್ ಪಂದ್ಯಾಟದ ಮೂಲಕ ಸಮಾಜವನ್ನು ಒಟ್ಟಿಗೆ ತರುವ ಕೆಲಸವಾಗಿದೆ. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಮೂಲಕ ದೈವಜ್ಞ ಸಮಾಜವನ್ನು ಒಟ್ಟುಗೂಡಿಸು ಪ್ರಯತ್ನ ಶ್ಲಾಘನೀಯ. ಈ ಮೂಲಕ ಎಸ್.ಎಲ್ ಶೇಟ್ ಹೆಸರು ರಾಜ್ಯಮಟ್ಟದಲ್ಲಿ ನಮ್ಮ ಸಮಾಜದ ಬ್ರಾಂಡ್ ಅಂಬಾಸೀಡರ್ ಆಗಿ ಮೂಡಿ ಬಂದಿದ್ದಾರೆ ಎಂದು ಮಾಜಿ ಕ್ರಿಕೆಟ್ ಆಟಗಾರ ಮತ್ತು ಬೆಂಗಳೂರಿನ ವಾಣಿಜ್ಯೋದ್ಯಮಿ ಶಿವಪ್ರಸಾದ ಮಂಜುನಾಥ್ ಶೇಟ್ ಹೇಳಿದರು.