ಜಿಲ್ಲೆ

ನಿವೃತ್ತ ನೌಕರರ ರಾಜ್ಯಮಟ್ಟದ ಸಮ್ಮೇಳನ 4ರಂದು

ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರಕ್ಕೆ ಒತ್ತಾಯಿಸಿ ಆಯೋಜನೆ

ಬಾಗೇಪಲ್ಲಿ : ಸರ್ಕಾರಿ ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರುಸುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ದ ಹೋರಾಡಲು ನಾವೇಲ್ಲರೂ ಒಗ್ಗಟ್ಟಿನಿಂದ ರಾಜ್ಯಮಟ್ಟದ ಸಮಾವೇಶದಲ್ಲಿ ಭಾಗವಹಿಸಬೇಕು, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟಸ್ವಾಮಿ ಹೇಳಿದರು.

ಏ.4ರಂದು ಬೆಂಗಳೂರಿನ ಆರಮನೆ ಆವರಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಾರ್ಯಾಗಾರ ಮತ್ತು ಸಮಾವೇಶ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿರುವ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ನಿವೃತ್ತ ನೌಕರರ ಮತ್ತು ಕುಟುಂಬ ಪಿಂಚಣಿದಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ 2020 ಫೆಬ್ರವರಿ 19ರಂದು ಬೃಹತ್ ರ‌್ಯಾಲಿ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗಿತ್ತು, ಬಳಿಕ 2022ರ ಜುಲೈನಲ್ಲಿ ಎರಡನೇ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅದರೂ ಸರ್ಕಾರ ನಿವೃತ್ತ ನೌಕರರ ಬೇಡಿಕೆಗಳನ್ನು ಈಡೇರಿಸಿಲ್ಲ. ಈ ಹಿಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಅವಧಿಯಲ್ಲಿ 7ವೇತನ ಅಯೋಗ ರಚನೆ ಮಾಡಲಾಗಿದೆ. ಅಯೋಗದ ಶಿಪಾರಸ್ಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಆಗಸ್ಟ್‌ನಲ್ಲಿ ಅಯೋಗದ ವರದಿಯನ್ನು ಅನುಷ್ಠಾನಗೊಳಿಸಿದ್ದು, ಆರ್ಥಿಕ ಸೌಲಭ್ಯಗಳನ್ನು ಮಾತ್ರ ನೀಡಿಲ್ಲ. ಆದ್ದರಿಂದ ಸರ್ಕಾರಿ ನಿವೃತ್ತ ನೌಕರರ ಬೇಡಿಕೆಯಂತೆ ಸಂಧ್ಯಾಕಿರಣ ಯೋಜನೆಯನ್ನು ಅನುಷ್ಠಾನಗೊಳಿಸಿ, ಮಾಸಿಕ ವೆಚ್ಚ ನೀಡಬೇಕು, 70 ವರ್ಷದಿಂದ 80 ವರ್ಷದೊಳಗಿನ ಸರ್ಕಾರಿ ನಿವೃತ್ತ ನೌಕರರಿಗೆ ಶೇ.10ರಷ್ಟು ಮೂಲ ಪಿಂಚಣಿಯಲ್ಲಿ ಆರ್ಥಿಕ ಸೌಲಭ್ಯ ಸೇರಿ ಎಲ್ಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಮಟ್ಟದ ಕಾರ್ಯಾಗಾರ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಪ್ರತಿಯೊಬ್ಬ ಸರ್ಕಾರಿ ನಿವೃತ್ತ ನೌಕರರು ಭಾಗವಹಿಸಿ, ಶಕ್ತಿ ಪ್ರದರ್ಶಿಸಬೇಕು ಎಂದರು.

ಸಂಘದ ಪದಾಧಿಕಾರಿಗಳಾದ ಡಿ.ವಿ.ಶ್ರೀನಿವಾಸಯ್ಯ, ಮುನೀರ್ ಅಹಮದ್, ಎಸ್.ಮುನಿರಾಮಯ್ಯ, ವಿ.ಮುನಿಯಪ್ಪ, ಪಿ.ಎನ್.ಕೃಷ್ಣಪ್ಪ, ಆರ್.ನಾರಾಯಣ, ವೀರಾಚಾರಿ, ಭಾಸ್ಕರರೆಡ್ಡಿ, ಪಿ.ವಿ.ಗೋವಿಂದರೆಡ್ಡಿ, ಜಯಮ್ಮ, ರಾಮದಾಸ್, ಎಚ್.ವೆಂಕಟೇಶ್, ಗಂಗಯ್ಯ, ಪಿ.ಜಿ.ಶಿವಶಂಕರಚಾರಿ, ನಜೀರಬೇಗಂ, ಶಕುಂತಲಮ್ಮ, ಪಿ.ಸಿ.ಲಕ್ಷ್ಮಯ್ಯ ಇದ್ದರು.