ಜಿಲ್ಲೆ

ಡಿ.23ರಂದು ರಾಯಚೂರಿನಲ್ಲಿ ರಾಜ್ಯಮಟ್ಟದ ಸಮಾವೇಶ: ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾಹಿತಿ

ಮಂಡ್ಯ: ರೈತ ಹೋರಾಟಗಾರ ದಿ.ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಮಾಜಿ ಪ್ರಧಾನಿ ದಿ.ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ ಮತ್ತು ರೈತ ದಿನಾಚರಣೆ ಅಂಗವಾಗಿ ಡಿ.23ರಂದು ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಜ್ಯಮಟ್ಟದ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.

ಅಂದು ಬೆಳಗ್ಗೆ 10.30ಕ್ಕೆ ಸಮಾವೇಶವನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್ ಭಾಗವಹಿಸಲಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸನ್ಮಾನ ಆಯೋಜಿಸಿದ್ದು, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತ ಪರವಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಚೌಧರಿ ಚರಣ್ ಸಿಂಗ್ ಜನ್ಮದಿನ ಆಚರಿಸಿ ಬಳಿಕ ಅವರ ವಿಚಾರಗಳ ಮಂಥನ ನಡೆಯಲಿದೆ. ಅಂತೆಯೇ ರೈತ ಚಳವಳಿಯ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಸಮಾವೇಶಕ್ಕೆ ಮಂಡ್ಯ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ರೈತರು ಆಗಮಿಸಲಿದ್ದಾರೆ. ಸಮಾವೇಶದ ಬಳಿಕ ಅಂದರೆ ಮಧ್ಯಾಹ್ನ 3.30ಕ್ಕೆ ರಾಜ್ಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಇನ್ನು ಕೆಆರ್‌ಎಸ್ ಡ್ಯಾಂನಲ್ಲಿ ಡಿ.11ರ ಸಂಜೆ ವೇಳೆಗೆ 96.34 ಅಡಿ ನೀರಿನ ಸಂಗ್ರಹವಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಅಗತ್ಯವಿರುವುದರಿಂದ ನಾಲೆಗೆ ನೀರು ಹರಿಸದಂತೆ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ಸಿಂಗ್ ಸೂಚನೆ ನೀಡಿದ್ದಾರೆನ್ನುವ ಮಾಹಿತಿ ಇದೆ. ಆದರೆ ಸಂಕ್ರಾಂತಿ ವೇಳೆಗೆ ಇನ್ನೂ ಒಂದು ಕಟ್ಟು ನೀರು ಬಿಡಲೇಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಬೇಸಿಗೆ ಬೆಳೆಗೆ ನೀರು ಅಲಭ್ಯವಾಗುವ ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಬೇಕು. ಪ್ರಸ್ತುತ ಕಬ್ಬು, ಭತ್ತ, ರಾಗಿ ಬೆಳೆಗಳ ಬೆಳೆ ಪ್ರಮಾಣ ಕುಸಿತವಾಗಿದ್ದು, ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಪ್ರತಿ ಎಕರೆಗೆ 25 ಸಾವಿರ ರೂ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ ಅವರು, ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ತೊಡೆ ತಟ್ಟಿದ ಜಿಲ್ಲಾ ಎಸ್ಪಿ ಭೀಮಾಶಂಕರ ಗುಳೇದ ವರ್ತನೆಯನ್ನು ರೈತ ಸಂಘ ಖಂಡಿಸುತ್ತದೆ. ಮುಂದೆ ಇಂತಹ ಅಸಭ್ಯ ವರ್ತನೆ ತೋರಿಸಬಾರದು ಎಂದು ಎಚ್ಚರಿಕೆ ನೀಡಿದರು.

ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ರೈತ ಸಂಘದ ಲಿಂಗಪ್ಪಾಜಿ, ರವಿಕುಮಾರ್, ನಾಗರಾಜು, ವಿಜಯಕುಮಾರ್, ಶಂಕರ್, ಶಿವಳ್ಳಿ ಚಂದ್ರು ಇದ್ದರು.