ಜಿಲ್ಲೆ

ರಾಜ್ಯಮಟ್ಟದ ಸಿರಿಧಾನ್ಯ ಮೇಳ ಇಂದು: ಮಂಡ್ಯ ನಗರದಲ್ಲಿ ಮೊದಲ ಬಾರಿಗೆ ಬೆಲ್ಲದ ಪರಿಷೆ ಆಯೋಜನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರೈತರಿಗೆ ಸಾವಯವ ಬೆಳೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆ.28ರಂದು ನಗರದಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಮೇಳ ಆಯೋಜಿಸಲಾಗಿದೆ. ಅಂತೆಯೇ ಮೊದಲ ಬಾರಿಗೆ ಬೆಲ್ಲದ ಪರಿಷೆ ನಡೆಯುತ್ತಿದೆ. ಜಿಲ್ಲೆಯವರೇ ಕೃಷಿ ಸಚಿವರಾಗಿರುವುದರಿಂದ ಹೆಚ್ಚಿನ ಮಹತ್ವ ಕೊಡಲಾಗಿದೆ.

ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಮಂತ್ರಾಲಯ, ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರ್ತು ನಿಗಮ ನಿಯಮಿತ, ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಡಾ.ರಾಜ್‌ಕುಮಾರ್ ಬಡಾವಣೆಯ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗ್ಗೆ 10.30ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಮೇಳವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇನ್ನು ಮೇಳಕ್ಕೆ ರೈತರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈಗಾಗಲೇ ಸಿರಿಧಾನ್ಯ ನಡಿಗೆ, ಸಿರಿಧಾನ್ಯ ಪಾಕ ಸ್ಪರ್ಧೆ, ಚಿಣ್ಣರ ಚಿತ್ರಕಲೆ ಹಾಗೂ ಮಂಡ್ಯದ ಬೆಲ್ಲ ಕುರಿತು ಪ್ರಬಂಧ ಸ್ಪರ್ಧೆ ನಡೆಸಲಾಗಿದೆ.

ರೈತರು ಸಾವಯವ ಬೆಳೆ ಬೆಳೆಯುವುದನ್ನು ಹೆಚ್ಚು ಮಾಡುವುದರ ಜತೆಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ಉದ್ದೇಶವನ್ನು ಹೊಂದಲಾಗಿದೆ. ಮೇಳದಲ್ಲಿ 3000ಕ್ಕೂ ಹೆಚ್ಚು ಪ್ರಗತಿಪರ ರೈತರು ಹಾಗೂ ಸಿರಿಧಾನ್ಯ ಬೆಳೆಗಾರರು, ರೈತ ಉತ್ಪಾದಕ ಸಂಸ್ಥೆಗಳು, ಸಂಸ್ಕರಣೆದಾರರು, ಬೆಲ್ಲ ಉತ್ಪಾದಕರು, ಕಿರು ಉದ್ದಿಮೆದಾರರು, ಸ್ವಸಹಾಯ ಸಂಘದ ಸದಸ್ಯರು ಸೇರಿದಂತೆ 3000ಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ. 135 ವಸ್ತು ಪ್ರದರ್ಶನ ಮಳಿಗೆ ಪ್ರಾರಂಭಿಸಲಿದ್ದು, ರೈತರಿಗೆ ಮಾಹಿತಿ ನೀಡಲಾಗುವುದು. ಬೆಲ್ಲದ ಪರಿಷೆಗೆ 20 ಮಳಿಗೆ, ಆಹಾರ ಮೇಳದ ಮಳಿಗೆ 15, ಇತರೆ ಜಿಲ್ಲೆಗಳ ಪಿಎಂಎಫ್‌ಎಂಇ ಯೋಜನೆ ಫಲಾನುಭವಿಗೆ 38 ಮಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ 20 ಮಳಿಗೆ, ಎನ್‌ಆರ್‌ಎಲ್ಎಂ 4 ಮಳಿಗೆ, ಇತರೆ ಸ್ವಸಹಾಯ ಸಂಘಗಳಿಗೆ 10 ಮಳಿಗೆ, ಕೃಷಿ ಸಂಸ್ಕರಣಾ ಘಟಕ ತಯಾರಕರಿಗೆ 6 ಮಳಿಗೆಯನ್ನು ವಸ್ತು ಪ್ರದರ್ಶನಕ್ಕೆ ಮೀಸಲಿಡಲಾಗಿದೆ.

ಮಾತ್ರವಲ್ಲದೆ ಪ್ರತಿಷ್ಠಿತ ಆಹಾರ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಸಿರಿಧಾನ್ಯ ಸಂಸ್ಕರಣೆ ಕುರಿತು ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರಕುವ ಆರ್ಥಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು. ಯೋಜನೆಯ ಅನುಷ್ಠಾನಕ್ಕಾಗಿ ಸಾಲ ಸೌಲಭ್ಯ ನೀಡಲು ಅವಶ್ಯವಿರುವ ದಾಖಲಾತಿ ಹಾಗೂ ಮಾಹಿತಿಯನ್ನು ನೀಡಲು ಬ್ಯಾಂಕ್ ಸಲಹಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ. ಇದರೊಟ್ಟಿಗೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(ಪಿಎಂಕೆಎಸ್‌ವೈ) 2.0 ಯೋಜನೆ ಉದ್ಘಾಟನೆ, ಪ್ರಧಾನಮಂತ್ರಿ ಕಿರುಉದ್ದಿಮೆ ನಿಯಮಬದ್ಧಗೊಳಿಸುವಿಕೆ ಯೋಜನೆಯ(ಪಿಎಂಎಫ್‌ಎಂಇ) ಫಲಾನುಭವಿ ರೈತ ದಂಪತಿಗೆ ಸನ್ಮಾನಿಸಲಾಗುವುದು. ಜತೆಗೆ ಪಿಎಂಎಫ್‌ಎಂಇ ಯೋಜನೆಯ ಫಲಾನುಭವಿಗಳ 22 ಉತ್ಪನ್ನಗಳ ಬ್ರಾೃಂಡ್ ಬಿಡುಗಡೆ ಹಾಗೂ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಣೆ ಮಾಡಲಾಗುತ್ತಿದೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುತ್ತಿದೆ.

ಮೊದಲ ಬಾರಿಗೆ ಪರಿಷೆ: ಸಕ್ಕರೆನಾಡು ಮಂಡ್ಯದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಬೆಲ್ಲದ ಪರಿಷೆ ಆಯೋಜಿಸಲಾಗಿದೆ. ಇದಕ್ಕೆ ಹಲವು ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ರೀತಿಯ ಬೆಲ್ಲದ ಪ್ರದರ್ಶನದ ಜತೆಗೆ ಮಾಹಿತಿ ಕೊಡಲಾಗುತ್ತಿದೆ. ಜಿಲ್ಲೆಯ ಕಬ್ಬು ಬೆಳೆಗಾರರು ಹಲವಾರು ವರ್ಷಗಳಿಂದ ಬೆಲ್ಲ ಉತ್ಪಾದನೆಯಲ್ಲಿ ತೊಡಗಿದ್ದು, ರಾಷ್ಟ್ರದಲ್ಲಿ ಮಂಡ್ಯದ ಬೆಲ್ಲ ಹೆಸರುವಾಸಿ. ಬೆಲ್ಲವನ್ನು ಔಷಧ, ಆಹಾರಕ್ಕಾಗಿ ಶತಮಾನಗಳಿಂದಲೂ ಬಳಸಲಾಗುತ್ತಿದೆ. ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಬೆಲ್ಲದ ಪಾತ್ರ ದೊಡ್ಡದು. ನಗರ ಪ್ರದೇಶಗಳಲ್ಲಿ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲದ ಬಳಕೆ ಕುರಿತು ಅರಿವು ಮೂಡಿಸಲು ಆಧ್ಯತೆ ನೀಡಲಾಗಿದೆ.