ಮಂಡ್ಯ: ಜಿಲ್ಲೆಯ ಪ್ರತಿಷ್ಠಿತ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಡಾ.ವಿ.ಟಿ.ಸುಶೀಲಾ ಜಯರಾಂ ಟ್ರಸ್ಟ್‌ನಿಂದ ಕೊಡಮಾಡುವ ರಾಜ್ಯಮಟ್ಟದ ದೇಶ ಸೇವಾ ಪ್ರಶಸ್ತಿಗೆ ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕು ಅರ್ಜುನದೊಡ್ಡಿ ಗ್ರಾಮದ ವೀರಯೋಧ ಸಕ್ರಿಯ ನಾಯಕ್(ಮರಣೋತ್ತರ), ಸಾಹಿತ್ಯ ಸೇವಾ ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ಎಂ.ಜಿ.ಮಂಜುನಾಥ್ ಹಾಗೂ ವೈದ್ಯಕೀಯ ಸೇವಾ ಪ್ರಶಸ್ತಿಗೆ ಮಂಡ್ಯದವರೇ ಆದ ಬೆಳ್ಳೂರು ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ.ಕೆ.ಎಂ.ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಕೆ.ಎಸ್.ಜಯರಾಂ, ಜು.15ರಂದು ಬೆಳಗ್ಗೆ 10.15ಕ್ಕೆ ನಗರದ ಗಾಂಧಿಭವನದಲ್ಲಿ ಆಯೋಜಿಸಿರುವ ಶತಾಯುಷಿ ಸಾಹಿತಿ ದಿವಂಗತ ಸೀತಾಸುತ ಅವರ 125ನೇ ಸಂಸ್ಮರಣೆ ಸಮಾರಂಭದಲ್ಲಿ ಡಾ.ವಿ.ಟಿ.ಸುಶೀಲಾ ಜಯರಾಂ ಹೆಸರಿನಲ್ಲಿ ಪುರಸ್ಕೃತರಿಗೆ ತಲಾ 20 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಕ್ರಿಯ ನಾಯಕ್ ಅವರಿಗೆ ನೀಡಲಾಗುತ್ತಿರುವ ಮರಣೋತ್ತರ ಪ್ರಶಸ್ತಿಯನ್ನು ಅವರ ಮಡದಿ ಜ್ಯೋತಿಬಾಯಿ ಸ್ವೀಕರಿಸಲಿದ್ದಾರೆ. ಇವರೊಟ್ಟಿಗೆ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಐವರು ವೀರ ಸೈನಿಕರಿಗೆ ವಿಶೇಷ ಗೌರವ ಸಮರ್ಪಣೆ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಕೆ.ರಾಜೇಂದ್ರ ವಹಿಸಲಿದ್ದು, ಸೀತಾಸುತ ಅವರನ್ನು ಕುರಿತು ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್.ದೊರೆಸ್ವಾಮಿ ಮಾತನಾಡಲಿದ್ದಾರೆ. ಅಂತೆಯೇ ಗುರುದೇವ ಲಲಿತಾಕಲಾ ಅಕಾಡೆಮಿಯ ಡಾ.ಚೇತನಾ ರಾಧಾಕೃಷ್ಣ ಅವರ ನಿರ್ದೇಶನದಲ್ಲಿ ಭರತನಾಟ್ಯ ನೃತ್ಯ ವೈಭವ ಆಯೋಜಿಸಲಾಗಿದೆ ಎಂದು ಹೇಳಿದರು.
ಶೇಖರ್, ಪ್ರಶಾಂತ್, ಲೋಕೇಶ್, ಸುರೇಶ್ ಇದ್ದರು.