ಮಂಡ್ಯ: ಮಂಡ್ಯ ಎಂದರೆ ಸಕ್ಕರೆಗೆ ಹೆಸರುವಾಸಿ. ಅಂತೆಯೇ ಜಿಲ್ಲೆಯ ಜನರೂ ಸಕ್ಕರೆಯಂತ ಮನಸ್ಸಿನವರು ಎಂದು ಟಿವಿ ಧಾರಾವಾಹಿ ಮತ್ತು ಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಂ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಗಾಂಧಿ ಭವನದಲ್ಲಿ ಕನ್ನಡ ಮಾಸಪತ್ರಿಕೆ ‘ಜೀವನಾಡಿ’ ವತಿಯಿಂದ ಚಲನಚಿತ್ರ ಮತ್ತು ಕಿರುತೆರೆ ನಟ ದಿ.ಎಂ.ರವಿಪ್ರಸಾದ್ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯ ಮಟ್ಟದ ಹವ್ಯಾಸಿ ರಂಗನಟ ಪ್ರಶಸ್ತಿ, ಜೀವನಾಡಿ ಸಾಹಿತ್ಯ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ, ಜೀವನಾಡಿ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಜೀವನಾಡಿ ಬಳಗದ ಲೇಖಕರ ಕೃತಿಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ಎಚ್.ಎಲ್.ಕೇಶವಮೂರ್ತಿ, ಮಾಜಿ ಶಾಸಕ ಕೆ.ಎಸ್.ಸಚ್ಚಿದಾನಂದ, ಮುರಳಿ ಮುಂತಾದವರು ನನ್ನ ಬಗ್ಗೆ ಪ್ರೀತಿ ಹೊಂದಿದ್ದರು. ಇಂತಹ ಪ್ರೀತಿಯ ಅಭಿಮಾನದಿಂದ ಅನಾರೋಗ್ಯದ ನಡುವೆಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಮಂಡ್ಯ ಜನರ ಪ್ರೀತಿಗೆ ನಾನು ಸದಾ ಕೃತಜ್ಞ ಎಂದು ಅಭಿಮಾನ ವ್ಯಕ್ತಪಡಿಸಿದರು.
ಮುಕ್ತ ಮುಕ್ತ ಧಾರಾವಾಹಿ ಹಾಗೂ ಮಗಳು ಜಾನಕಿಯಲ್ಲಿ ಮಂಡ್ಯ ರವಿ ಪ್ರಸಾದ್ ಅವರು ಉತ್ತಮ ನಟನಾಗಿ ಅಭಿನಯಿಸಿದ್ದಾರೆ. ಮಂಡ್ಯದ ಕೆಲ ಸಾಹಿತಿಗಳು ಸೇರಿದಂತೆ ಮಂಡ್ಯದ ಜನ ನನ್ನ ಪಾಲಿಗೆ ಸ್ಟಾರ್ ಆದವರು. ಕೆಲ ಅಭಿಮಾನಿಗಳು ಮಗಳು ಜಾನಕಿ ಧಾರಾವಾಹಿ ವಿಸ್ತರಿಸುವಂತೆ ಕೇಳಿಕೊಂಡರು. ರವಿ ಇಲ್ಲದ್ದರಿಂದ ಆ ಬಗ್ಗೆ ಮನಸ್ಸಾಗುತ್ತಿಲ್ಲ. ಕಲಾವಿದರನ್ನು ಕಳೆದುಕೊಂಡಾಗ ನಿರ್ದೇಶಕ ಅರ್ಧ ಸತ್ತಂತೆ ಆಗುತ್ತಾನೆ. ರವಿ ಇದ್ದಿದ್ದರೆ ಬೆಳಕು ಹೆಚ್ಚು ಬೆಳಗುತ್ತಿತ್ತು. ಸಂಕಟದ ನಡುವೆಯೂ ಬದುಕು ಕಟ್ಟಿಕೊಳ್ಳುವುದು ಸವಾಲಿನ ಕೆಲಸ. ಅದನ್ನು ಮಾಡುತ್ತಿರುವ ಎಚ್.ಎಸ್.ಮುದ್ದೇಗೌಡ ದಂಪತಿ, ರವಿ ಅವರ ಪತ್ನಿ ಮಾಲತಿ ಅವರನ್ನು ನೋಡಿದಾಗ ಕೆಲಸ ಮಾಡಲು ಸ್ಫೂರ್ತಿ ದೊರೆಯುತ್ತದೆ ಎಂದರು.
ಸಾಹಿತ್ಯ ಸ್ಪರ್ಧೆ ತೀರ್ಪುಗಾರ್ತಿ ಲಿಡ್ಕರ್ ಎಂಡಿ ಕೆ.ಎಂ.ವಸುಂಧರಾ ಮಾತನಾಡಿ, ನನ್ನ ಜಿಲ್ಲೆಯಿಂದ ಜೀವನಾಡಿಯಂತಹ ಗುಣಮಟ್ಟದ ಮಾಸ ಪತ್ರಿಕೆಯ ಹೊರಬರುತ್ತಿರುವುದು ಅಭಿಮಾನ ಮೂಡಿಸಿದೆ. ಇದು ಎಲ್ಲ ಪತ್ರಿಕೆಯಂತಲ್ಲ. ಇದರಲ್ಲಿ ರಾಜ್ಯಾದ್ಯಂತ ಲೇಖಕರ ಉತ್ಕೃಷ್ಟ ಬರಹಗಳಿವೆ. ಇಂತಹ ಪತ್ರಿಕೆ ಹೆಸರಿನಲ್ಲಿ ನಡೆಸಿದ ಸಾಹಿತ್ಯ ಸ್ಪರ್ಧೆಯಲ್ಲಿ ಕೆಲವನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಯಿತು. ಪತ್ರಿಕೆ ಇನ್ನಷ್ಟು ಪ್ರವರ್ಧಮಾನಕ್ಕೆ ಬರಲಿ ಎಂದರು.
ಕಸಾಪ ಕಾರ್ಯದರ್ಶಿ ಪಟೇಲ್ ಪಾಂಡು ಅಧ್ಯಕ್ಷತೆ ವಹಿಸಿದ್ದರು. ಜೀವನಾಡಿ ಪತ್ರಿಕೆ ಸಂಪಾದಕ ಪ್ರೊ.ಎಚ್.ಎಸ್.ಮುದ್ದೇಗೌಡ, ಸಾಹಿತಿ ವಿಶ್ವಾಸ್ ಡಿ.ಗೌಡ, ಮಾಲತಿ ರವಿಪ್ರಸಾದ್, ಕಲಾವಿದ ಚಂದನ್ ಶಂಕರ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ವಿನಯಕುಮಾರ್, ಎಚ್.ಆರ್.ಕನ್ನಿಕಾ, ಬಿ.ಎಂ.ಅಪ್ಪಾಜಪ್ಪ, ಉಪನ್ಯಾಸಕ ಪ್ರಶಾಂತ್ ಉಪಸ್ಥಿತರಿದ್ದರು.
ಇದೇ ವೇಳೆ ಚಲನಚಿತ್ರ ನಟ ದಿ.ಎಂ.ರವಿಪ್ರಸಾದ್ ಸ್ಮರಣಾರ್ಥ ರಾಜ್ಯ ಮಟ್ಟದ ಹವ್ಯಾಸಿ ರಂಗನಟ ಪ್ರಶಸ್ತಿಯನ್ನು ಕಿರುತೆರೆ ಕಲಾವಿದ ರಾಜೇಶ್ ನಟರಂಗ ಅವರಿಗೆ ಪ್ರದಾನ ಮಾಡಲಾಯಿತು.
4ನೇ ವರ್ಷದ ಜೀವನಾಡಿ ವಿಶೇಷ ಸಂಚಿಕೆಯನ್ನು ಸಾಹಿತಿ ಎಸ್.ಶ್ರೀನಿವಾಸಶೆಟ್ಟಿ ಬಿಡುಗಡೆ ಮಾಡಿದರು. ಜೀವನಾಡಿ ಉಪಸಂಪಾದಕ ವಿಶ್ವಾಸ ಡಿ.ಗೌಡ ಅವರ ’ವಿಶ್ವಾಸದ ವಿಮರ್ಶೆ’ ಹಾಗೂ ಕೀರ್ತಿ ಕಿರಣ್ ಕುಮಾರ್ ಅವರ ’ಕರೆಗಂಟೆ’ ಪುಸ್ತಕವನ್ನು ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ ಬಿಡುಗಡೆ ಮಾಡಿದರು. ಜೀವನಾಡಿ ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆ ವಿಜೇತರಾದ ವಿನಾಯಕ ಅರಳಸುಳಿ ಶಿವಮೊಗ್ಗ ಜಿಲ್ಲೆ(ಸಣ್ಣ ಕಥೆ), ಸಂತೆಬೆನ್ನೂರು ಪೈಜ್ನಟ್ರಾಜ್(ಪ್ರಬಂಧ), ವಿನುತಾ ಹಂಚಿನಮನಿ ಧಾರವಾಡ(ಕವಿತೆ) ಅವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.