ಮೈಸೂರು: ಪ್ರತಿಯೊಬ್ಬರು ಉನ್ನತ ಹುದ್ದೆಗೆ ಏರಲು ಸಂವಿಧಾನ ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸಿದ್ದು, ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಹೇಳಿದರು.
ರಾಜ್ಯ ವಕೀಲರ ಪರಿಷತ್, ಮೈಸೂರು ವಕೀಲರ ಸಂಘದ ವತಿಯಿಂದ ನಗರದ ದೊಡ್ಡಕೆರೆ ಮೈದಾನದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯಮಟ್ಟದ 10ನೇ ವಕೀಲರ ಸಮ್ಮೇಳನದಲ್ಲಿ ಮಾತನಾಡಿ, ವಕೀಲನಾಗಿ ವೃತ್ತಿ ಜೀವನ ಪ್ರಾರಂಭಿಸಿದ ನಾನು ಇಂದು ಸುಪ್ರಿಂಕೋರ್ಟ್ ನ್ಯಾಯಮೂರ್ತಿ ಆಗಿದ್ದೇನೆ. ನಾನು ವೃತ್ತಿಜೀವನ ಪ್ರಾರಂಭಿಸಿದ ಸಂದರ್ಭ ಇಷ್ಟೊಂದು ಉನ್ನತ ಹುದ್ದೆಯನ್ನು ಅಲಂಕರಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಇಂತಹ ಉನ್ನತ ಹುದ್ದೆ ಏರಲು ಸಂವಿಧಾನ ನಮಗೆ ಎಲ್ಲ ಅವಕಾಶಗಳನ್ನು ಒದಗಿಸಿದ್ದು, ನೀವು (ವಕೀಲರು) ಸಹ ನನ್ನ ಆಗ ಉನ್ನತ ಸ್ಥಾನಕ್ಕೆ ಏರಬಹುದು ಎಂದು ಹೇಳಿದರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ವಕೀಲರು ಮಹತ್ವದ ಪಾತ್ರ ನಿರ್ವಹಿ ಸುತ್ತಿದ್ದಾರೆ, ವಕೀಲರು ನ್ಯಾಯಾಂಗ ವ್ಯವಸ್ಥೆಯ ರಕ್ಷಕರು ಇದ್ದ ಹಾಗೆ. ದೇಶದ ಕಾನೂನು ರಕ್ಷಿಸುವಲ್ಲಿ ವಕೀಲರು ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಯಧಾನ ವಿಳಂಬವಾಗುತ್ತಿದ್ದು, ಇದನ್ನು ತಪ್ಪಿಸಲು ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸುವುದು ಉತ್ತಮ. ಲೋಕ ಅದಾಲತ್ ಮೂಲಕ ಹಲವಾರು ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ರಾಜಿಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕೋರ್ಟ್ ನ್ಯಾಯಮೂರ್ತಿ ಕೆ. ಸೋಮಶೇಖರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಅಡ್ವೋಕೇಟ್ ಜನರಲ್ ಕೆ. ಶಶಿ ಕಿರಣ್ ಶೆಟ್ಟಿ, ರಾಷ್ಟ್ರೀಯ ವಕೀಲರ ಪರಿಷತ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ರಾಜ್ಯಾಧ್ಯಕ್ಷ ಎಚ್.ಎಲ್. ವಿಶಾಲ್ ರಘು, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ ಹಾಗೂ ಇತರರು ಇದ್ದರು.