ಜಿಲ್ಲೆ

ಕಾಯ್ದೆ ಕುರಿತು ವರದಿ ಸಲ್ಲಿಸಿ: ಆಯೋಗದ ಮುಖ್ಯ ಆಯುಕ್ತ ಆಶಿತ್ ಮೋಹನ್‌ಪ್ರಸಾದ್ ಹೇಳಿಕೆ

ಮಂಡ್ಯ: ಮಾಹಿತಿ ಹಕ್ಕು ಅಧಿನಿಯಮವನ್ನು ಅನುಷ್ಠಾನಗೊಳಿಸಿ 20 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಪರಿಣಾಮಕಾರಿ ಅನುಷ್ಠಾನದ ಕುರಿತಂತೆ ಜಿಲ್ಲಾಧಿಕಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ವರದಿಯನ್ನು ಕಳುಹಿಸಿಕೊಡುವಂತೆ ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಆಶಿತ್ ಮೋಹನ್‌ಪ್ರಸಾದ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಆಯೋಗ ರಾಜ್ಯಮಟ್ಟದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಕಾರ್ಯಕ್ರಮ ಆಯೋಜಿಸುತ್ತಿದೆ. ಹೆಚ್ಚು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸ್ವೀಕರಿಸುವ ಕಚೇರಿಗಳು ಲೋಕ್‌ಅದಾಲತ್ ಮಾದರಿಯಲ್ಲಿ ಒಂದು ದಿನ ನಿಗದಿಪಡಿಸಿಕೊಂಡು ವಿಲೇವಾರಿ ಮಾಡಿ. ಇದರಿಂದ ಬಹಳಷ್ಟು ಅರ್ಜಿ ಆಯೋಗದ ಬಳಿ ಬರುವುದಿಲ್ಲ ಎಂದರು.

ಮಾಹಿತಿ ಹಕ್ಕು ಅಧಿನಿಯಮದ 4(1)ಎ ಮತ್ತು 4(1) ಬಿ ವಿವರವನ್ನು ಪ್ರಕಟಿಸಿ. ಇದರಿಂದ ಬಹಳಷ್ಟು ಮಾಹಿತಿಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ಮಾಹಿತಿ ಹಕ್ಕು ನಿಯಮದಲ್ಲಿ ನೀಡಬೇಕಿರುವ ಹಾಗೂ ಗೌಪ್ಯತೆ ಕಪಾಡುವ ದಾಖಲೆಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅದರಂತೆ ಅನುಸರಿಸಿ ಮಾಹಿತಿ ನೀಡಿ. ದೇಶದಲ್ಲಿ ಪ್ರತಿ ವರ್ಷ ಸರಾಸರಿ 60 ಲಕ್ಷ ಆರ್‌ಟಿಐ ಹಾಗೂ ಕರ್ನಾಟಕ ರಾಜ್ಯದಲ್ಲಿ ಸರಾಸರಿ 4.5 ಲಕ್ಷ ಅರ್ಜಿ ಸ್ವೀಕೃತವಾಗುತ್ತದೆ. ಇದರಲ್ಲಿ 25,000 ಅರ್ಜಿ ಎರಡನೇ ಮೇಲ್ಮನವಿ ಆಯೋಗಕ್ಕೆ ಬರುತ್ತದೆ. ಸ್ವಯಂ ಸೇವಾ ಸಂಸ್ಥೆ ಮೂಲಕ ಮಾಹಿತಿ ಹಕ್ಕು ಅಧಿನಿಯಮದ ಉಪಯುಕ್ತತೆಯ ಬಗ್ಗೆ ಸರ್ವೇ ನಡೆಸಲಾಗಿದ್ದು, 45 ರಿಂದ 50 ಪ್ರತಿಶತ ಜನಗಳಿಗೆ ಉಪಯುಕ್ತವಾಗಿದೆ ಎಂಬುದು ಕಂಡುಬಂದಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲೆಯಲ್ಲಿ 2024-25 ರಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಸ್ವೀಕೃತ ಹಾಗೂ ವಿಲೇವಾರಿಯಾದ ಅರ್ಜಿ ಕುರಿತು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಪ್ರತೀಕ್, ಜಂಟಿ ಕೃಷಿ ನಿರ್ದೇಶಕ ವಿ.ಅಶೋಕ್, ಡಿಡಿಪಿಐ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ರೂಪಾಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.