ಜಿಲ್ಲೆ

ಅವಶ್ಯಕತೆಗೆ ತಕ್ಕಂತೆ ಸೌಲಭ್ಯ ಪೂರೈಸಿ: ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್‌ಭಟ್ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಹಾಸ್ಟೆಲ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಖ್ಯೆಗೆ ಅನುಗುಣವಾಗಿ ಹಾಗೂ ಅವಶ್ಯಕತೆಗೆ ತಕ್ಕಂತೆ ಸೌಲಭ್ಯ ಒದಗಿಸಿಕೊಡಿ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶ್ಯಾಮ್‌ಭಟ್ ಸೂಚನೆ ನೀಡಿದರು.

ನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಹಾಸ್ಟೆಲ್‌ನ ಅಡುಗೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಳಗ್ಗೆ ಸಿದ್ಧಪಡಿಸಿವಿರುವ ಉಪಹಾರದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ವಿದ್ಯಾರ್ಥಿಗಳಿಗೆ ಶುಚಿ ಹಾಗೂ ರುಚಿಯಾದ ಆಹಾರ ನೀಡಬೇಕು ಎಂದು ಸೂಚನೆ ನೀಡಿದರು. ಅಂತೆಯೇ ಹಾಜರಿದ್ದ ವಿದ್ಯಾರ್ಥಿಗಳ ಬಳಿ ಮೆಸ್ ಸಮಿತಿ ರಚನೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಮೆಸ್ ಸಮಿತಿಯು ಪ್ರತಿದಿನ ಆಹಾರ ಸಾಮಗ್ರಿಗಳನ್ನು ಅಡುಗೆ ಮಾಡುವ ಸಿಬ್ಬಂದಿಗೆ ನೀಡುವಾಗ ಪರಿಶೀಲನೆ ನಡೆಸಬೇಕು. ಯಾವುದೇ ತೊಂದರೆ ಇದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಅಡುಗೆ ತಯಾರಿಸುವ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಜತೆ ಮಾತನಾಡಿ ಪ್ರತಿ ಮಾಹೆ ಸಂಬಳ ದೊರಕುತ್ತಿರುವ ಬಗ್ಗೆ ಖಾತ್ರಿ ಪಡೆಸಿಕೊಂಡರು. ಬಳಿಕ ವಿದ್ಯಾರ್ಥಿಗಳ ಕೊಠಡಿಗೆ ತೆರಳಿ ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೊಳ್ಳೆ ಪರದೆ ಹಾಗೂ ಚಳಿಗಾಲದಲ್ಲಿ ಗೀಸರ್ ಅವಶ್ಯಕತೆ ಇದೆ. ಈ ಕುರಿತಂತೆ ಜಿಲ್ಲಾ ಪಂಚಾಯಿತಿ ಅಥವಾ ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಇದರ ಜತೆಯಲ್ಲಿ ಇಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ದಾಖಲಾತಿ ಎರಡು ಹಾಸ್ಟಲ್‌ಗಳಲ್ಲಿ ಹೆಚ್ಚಿದ್ದು, ಅದಕ್ಕನುಸಾರವಾಗಿ ಶೌಚಗೃಹದ ಅವಶ್ಯಕತೆಯನ್ನು ಪೂರೈಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ್‌ಪೂಜರ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಇ.ಗಂಗಾಧರಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್ ಇತರರಿದ್ದರು.