ಮಂಡ್ಯ: ಅಧಿಕಾರಿಗಳು ಸಾರ್ವಜನಿಕರು ತಮ್ಮ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕಷ್ಟಗಳನ್ನು ಆಲಿಸಿ ಸೌಜನ್ಯದಿಂದ ವರ್ತಿಸಿದರೆ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣ ಸಾಕಷ್ಟು ಕಡಿಮೆಯಾಗುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್‌ಭಟ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳಿಗೆ ತಮ್ಮ ಕೆಲಸದಲ್ಲಿ ಒತ್ತಡವಿರುತ್ತದೆ. ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವವರು ಮಾನವ ಹಕ್ಕುಗಳ ರಕ್ಷಕರು ಎಂಬುದನ್ನು ಮರೆಯಬಾರದು. ಸರ್ಕಾರ ನೀಡುವ ಸವಲತ್ತುಗಳನ್ನು ಸಾರ್ವಜನಿಕರಿಗೆ ಒದಗಿಸುವುದು ಅಧಿಕಾರಿಗಳ ಕರ್ತವ್ಯ ವಾಗಿದೆ ಎಂದರು.
ಜಿಲ್ಲೆಯಲ್ಲಿ ಹಾಸ್ಟಲ್ ಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ವ್ಯವಸ್ಥೆಗಳು ತೃಪ್ತಿಕರವಾಗಿರುತ್ತದೆ. ಮಿಮ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ವೈದ್ಯರ ಕೊರತೆ ಕಂಡುಬಂದಿರುತ್ತದೆ. ವೈದ್ಯರ ನೇಮಕಾತಿ ರಾಜ್ಯ ಮಟ್ಟದಲ್ಲಿ ನಡೆಯಬೇಕಿದ್ದು, ಆಯೋಗ ಶಿಫಾರಸು ಮಾಡಲಿದೆ. ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಂಡು ಸರ್ಕಾರಿ ಕಚೇರಿಗೆ ಭೇಟಿ ನೀಡಿ ಹಣದ ಬೇಡಿಕೆ ಇಡುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಇಂತಹ ಪ್ರಕರಣಗಳು ಕಂಡು ಬಂದಲ್ಲಿ ದೂರು ಸಲ್ಲಿಸಿ ಎಂದರು.
ಆಯೋಗದ ಹಿಂದಿನ ಅಧ್ಯಕ್ಷರು ಹಾಗೂ ಸದಸ್ಯರು 2023 ಫೆಬ್ರವರಿಯಲ್ಲಿ ನಿವೃತ್ತರಾದರು. ನಂತರ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕವಾಗಲು 8 ತಿಂಗಳು ಬೇಕಾಯಿತು. ಈ ಅವಧಿಯಲ್ಲಿ ಸಲ್ಲಿಕೆಯಾದ 5,400 ಅರ್ಜಿಗಳು ಹಾಗೂ ನೇಮಕಾತಿಯಾದ ನಂತರ ಸಲ್ಲಿಕೆಯಾದ 6,417 ಪ್ರಕರಣಗಳು ಸೇರಿಕೊಂಡವು. ಆಯೋಗವು ಒಂದು ವರ್ಷದ ಅವಧಿಯಲ್ಲಿ ಸುಮಾರು 8,777 ಪ್ರಕರಣಗಳನ್ನು ಇತ್ಯರ್ಥಪಡಿಸಿ ಈಗ 3000 ಪ್ರಕರಣಗಳು ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಆಯೋಗವು ಪ್ರತಿ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದೂರು ಸ್ವೀಕರಿಸುತ್ತದೆ. ಇದಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಬೆಂಗಳೂರಿನ ಕಚೇರಿಗೆ ಬಂದು ಸಲ್ಲಿಸಬಹುದು. ಇದಲ್ಲದೇ ಆಯೋಗವು ಸ್ವಯಂ ಪ್ರೇರಿತವಾಗಿ ಪತ್ರಿಕೆಗಳ ವರದಿಯ ಮೇಲೆ ದೂರು ದಾಖಲಿಸಲಿದೆ ಎಂದರು.
ಆಯೋಗದ ಸದಸ್ಯ ಎಸ್.ಕೆ ವಂಟಿಗೋಡಿ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತೆ ಪ್ರತ್ಯೇಕವಾಗಿ ಡ್ರೆಸಿಂಗ್ ರೂಂ ವ್ಯವಸ್ಥೆ ಮಾಡಿ. ಏಕೆಂದರೆ ಒಂದೇ ಕೊಠಡಿಯಲ್ಲಿ 4 ರಿಂದ 5 ಹೆಣ್ಣು ಮಕ್ಕಳು ವಾಸಿಸುತ್ತಾರೆ. ಆಯೋಗಕ್ಕೆ ಸಲ್ಲಿಕೆಯಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಪತ್ರ ಬರೆದು ಕೇಳುವ ದಾಖಲೆಗಳನ್ನು ಶೀಘ್ರವಾಗಿ ಕಳುಹಿಸಿಕೊಡಿ. ಇದರಿಂದ ಪ್ರಕರಣಗಳನ್ನು ಬೇಗ ಇತ್ಯರ್ಥಪಡಿಸಬಹುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಮಾನವ ಹಕ್ಕುಗಳ ಆಯೋಗದ ಜತೆ ಸರ್ಕಾರಿ ಅಧಿಕಾರಿಗಳೆಲ್ಲರೂ ಕೈ ಜೋಡಿಸಿ,ಮಾನವ ಹಕ್ಕುಗಳ ಸಂರಕ್ಷಣೆ ಮಾಡಬೇಕು. ಮಾನವೀಯತೆ ಹಾಗೂ ಹೃದಯವಂತಿಕೆ ಮನೋಭಾವದಿಂದ ಕೆಲಸ ನಿರ್ವಹಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದರು
ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ್ ಪೂಜಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ದಾಖಲಾಗಿದ್ದ 20 ಪ್ರಕರಣಗಳ ವಿಚಾರಣೆ ನಡೆಸಲಾಯಿತು. ಸಭೆ ಮುಗಿದ ನಂತರ ಸಾರ್ವಜನಿಕರಿಂದ ದೂರು ಅರ್ಜಿಗಳನ್ನು ಆಯೋಗ ಸ್ವೀಕರಿಸಿತು.