ಜಿಲ್ಲೆ

ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಹೆದ್ದಾರಿ ಬಂದ್

Hassan

ಚನ್ನರಾಯಪಟ್ಟಣ: ತಾಲೂಕಿನ ಗೂರಮಾರನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದವರ ಪೈಕಿ ಐವರಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕಟ್ಟಡದ ನೂರು ಮೀಟರ್ ವ್ಯಾಪ್ತಿಯನ್ನು ಬಫರ್ ಜೋನ್(ಪರಿವರ್ತಕ ಅಥವಾ ನಿಷೇಧಿತ ವಲಯ) ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿಯನ್ನು ಗುರುವಾರ ಬಂದ್ ಮಾಡಲಾಯಿತು.

ವಾರದ ಹಿಂದೆ ಮುಂಬೈನಿಂದ ಆಗಮಿಸಿದ್ದ ಸುಮಾರು 133 ಜನರನ್ನು ಮುರಾರ್ಜಿ ಶಾಲೆಯಲ್ಲಿ ಮೂರು ಬ್ಲಾಕ್‌ನಂತೆ ವ್ಯವಸ್ಥೆ ಮಾಡಿ ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಐವರಲ್ಲಿ ಸೋಂಕು ದೃಢಪಟ್ಟಿತ್ತು. ಅಲ್ಲದೆ ಮಂಗಳವಾರ ಮುಂಬೈನಿಂದ ಬಂದಿದ್ದ ಮತ್ತೊಂದು ಕುಟುಂಬದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿತ್ತು.

ಇದರಿಂದ ಎಚ್ಚೆತ್ತ ತಾಲೂಕು ಆಡಳಿತ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಮುರಾರ್ಜಿ ವಸತಿ ಶಾಲೆಯ ಕಟ್ಟಡವಿರುವ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿದೆ. ವಸತಿ ಶಾಲಾ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಚನ್ನರಾಯಪಟ್ಟಣದಿಂದ ತಿಪಟೂರು ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಎರಡೂ ಕಡೆಗೆ ನೂರು ಮೀಟರ್‌ನಂತೆ ಬಂದ್ ಮಾಡಲಾಗಿದೆ.