ಜಿಲ್ಲೆ

ಕರಾವಳಿಯ ಮರಳು ಸಮಸ್ಯೆ ನೀಗಿಸುವಲ್ಲಿ ಸರ್ಕಾರ ವಿಫಲ; ಯು.ಟಿ.ಖಾದರ್‌ ಆರೋಪ

reportermng

ಮಂಗಳೂರು: ಕರಾವಳಿಯಲ್ಲಿ ಮರಳಿನ ಸಮಸ್ಯೆ ವ್ಯಾಪಕವಾಗಿದ್ದು, ಜನಸಾಮಾನ್ಯರು ಮರಳಿಗೆ ಪರದಾಡುವ ಪರಿಸ್ಥಿತಿ ಬಂದಿದೆ. ಅಕ್ರಮವಾಗಿ ಮರಳು ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮೂರುಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡು ಮರಳು ಸಮಸ್ಯೆ ನೀಗಿಸುವಲ್ಲಿ ವಿಫಲವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಯು.ಟಿ.ಖಾದರ್‌ ಆರೋಪಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಸಿಆರ್‌ಜಡ್‌ ಪ್ರದೇಶದಲ್ಲಿ ಮರಳುಗಾರಿಕೆ ಸ್ಥಗಿತವಾಗಿದ್ದು, ಇಲ್ಲಿಯವರೆಗೆ ಆರಂಭಗೊಂಡಿಲ್ಲ. ಮಳೆಗಾಲ ಆರಂಭಕ್ಕೆ ಇನ್ನೊಂದು ತಿಂಗಳು ಮಾತ್ರ ಇರುವುದು ಜೂನ್‌ನಲ್ಲಿ ಮತ್ತೆ ಮರಳುಗಾರಿಕೆ ಸ್ಥಗಿತವಾಗುತ್ತದೆ. ಆದರೂ ರಾಜ್ಯ ಸರ್ಕಾರ ಮರಳು ತೆಗೆಯಲು ಒಪ್ಪಿಗೆ ನೀಡುತ್ತಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ ಎಷ್ಟು ರಾಜಧನ ನಷ್ಟವಾಗಿದೆ ಎಂದು ಸ್ಪಷ್ಟಪಡಿಸಬೇಕು. 2016-17 ಮತ್ತು 2017-18ರಲ್ಲಿ ಎಷ್ಟು ರಾಜಧನ ಸಂಗ್ರಹವಾಗಿತ್ತು ಎಂದು ಜನರ ಮುಂದೆ ಇಡಬೇಕು. ಇನ್ನೊಂದೆಡೆ ನಾನ್‌ಸಿಆರ್‌ಜಡ್‌ ಪ್ರದೇಶದಲ್ಲೂ 33 ಬ್ಲಾಕ್‌ಗಳ ಪೈಕಿ 19 ಬ್ಲಾಕ್‌ಗಳಿಗೆ ಟೆಂಡರ್‌ ಆಗಿದೆ. ಆದರೆ ರಾಜ್ಯ ಸರ್ಕಾರ ಇನ್ನೂ ಅದಕ್ಕೆ ಅನುಮೋದನೆ ನೀಡಿಲ್ಲ. ಈ ಹಿಂದೆ ಇದ್ದ ಸ್ಯಾಂಡ್‌ ಬಜಾರ್‌ ಆ್ಯಪ್ ನಲ್ಲಿ ಈ ಹಿಂದೆ 5,200 ರೂ.ಗೆ ಸಿಗುತ್ತಿದ್ದ ಮರಳನ್ನು 7 ಸಾವಿರ ರೂ.ಗಳಿಗೆ ಏರಿಸಲಾಗಿದೆ. ಸರ್ಕಾರ ತಕ್ಷಣ, ಕ್ರಮ ತೆಗೆದುಕೊಂಡು ಜನಸಾಮಾನ್ಯರಿಗೆ ಮರಳು ಸಿಗುವ ವ್ಯವಸ್ಥೆ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
*ಗೂಂಡಾಗಳ ಕೈಗೆ ರಾಜ್ಯ:
ರಾಜ್ಯ ಹಲವು ರೀತಿಯ ಕೋಮು ಸಂಘರ್ಷಗಳು ನಡೆಯುತ್ತಿದ್ದರೂ, ಮುಖ್ಯಮಂತ್ರಿಗಳು ಮೌನವಾಗಿದ್ದಾರೆ. ಗೃಹಸಚಿವರು, ಮಂತ್ರಿಗಳು, ಆಡಳಿತ ಪಕ್ಷದ ನಾಯಕರು ಒಂದೊಂದು ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಮುಂದೆ ಬಂದು ಜನರಿಗೆ ಧೈರ್ಯ ಹೇಳುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಗೂಂಡಾಗಳ ಕೈಗೆ ರಾಜ್ಯವನ್ನು ಕೊಟ್ಟು ಮೌನಕ್ಕೆ ಜಾರಿದ್ದಾರೆ ಎಂದು ಆರೋಪಿಸಿದರು.