ಜಿಲ್ಲೆ

ಮುಂಗಾರು ಅಧಿವೇಶನಕ್ಕೆ ಅಸ್ತು: ಸೆ.21ರಿಂದ 30ರವರೆಗೆ ಕಲಾಪ, ಸಚಿವ ಸಂಪುಟ ಸಭೆ ತೀರ್ಮಾನ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನಕ್ಕೆ ಮುಹೂರ್ತ ನಿಗದಿಯಾಗಿದೆ. ಸೆಪ್ಟೆಂಬರ್ 21ರಿಂದ 30ರವರೆಗೆ ಬೆಂಗಳೂರಿನಲ್ಲಿಯೇ ಅಧಿವೇಶನ ನಡೆಯಲಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ, ಸೆ.23ರ ಒಳಗಾಗಿ ಅಧಿವೇಶನ ಕರೆಬೇಕಾದ ಹೊಣೆಗಾರಿಕೆ ಇದೆ. ಹಾಗಾಗಿ ದಿನಾಂಕ ನಿಗದಿಪಡಿಸಲಾಗಿದೆ. ಅಧಿವೇಶನ ಹೇಗೆ ನಡೆಸಬೇಕೆಂಬ ಕುರಿತು ನಾನು, ವಿಧಾನಸಭೆ ಸ್ಪೀಕರ್ ಹಾಗೂ ವಿಧಾನಪರಿಷತ್ ಸಭಾಪತಿ ಸೇರಿ ರ್ಚಚಿಸಿ ತೀರ್ವನಿಸಲು ಸಿಎಂ ಸೂಚಿಸಿದ್ದಾರೆ ಎಂದರು.

ಕರೊನಾ ಸೋಂಕು ಉಲ್ಬಣದ ಕಾರಣ ಬಜೆಟ್ ಅಧಿವೇಶನವನ್ನು ತರಾತುರಿಯಲ್ಲಿ ಮುಂದೂಡಲಾಗಿತ್ತು. ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ಭೂಕಬಳಿಕೆ ನಿಷೇಧ ಕಾಯ್ದೆ, ಗ್ರಾಮ ಪಂಚಾಯಿತಿ ಕಾಯ್ದೆ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಿ ಕಾಯ್ದೆ ತಿದ್ದುಪಡಿ, ವಾಣಿಜ್ಯ ಮತ್ತು ಕೈಗಾರಿಕೆ ತಿದ್ದುಪಡಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿತ್ತು. ಇವುಗಳಿಗೆ ಸಂಪುಟ ಸಭೆ ಅನುಮೋದನೆ ಪಡೆಯಲಾಗಿದೆ ಎಂದರು.

ಸಹಕಾರ ಸಂಘಗಳ ಚುನಾವಣೆ: ಸಹಕಾರ ಸಂಘಗಳ ಚುನಾವಣೆಯನ್ನು ಡಿಸೆಂಬರ್​ವರೆಗೆ ಮುಂದೂಡ ಲಾಗಿತ್ತು. ಆಡಳಿತಾಧಿಕಾರಿಗಳ ನೇಮಕಕ್ಕೆ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಮುಖ್ಯಾಂಶಗಳು

  • ಕರ್ನಾಟಕ ಭವನದಲ್ಲಿ ಖಾಲಿ ಇರುವ 32 ಹುದ್ದೆಗೆ ನೇರ ನೇಮಕಕ್ಕೆ ಅನುಮೋದನೆ. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವವರಿಗೆ ವಾರ್ಷಿಕ 3 ಅಂಕಗಳಂತೆ 25 ಅಂಕಗಳವರೆಗೆ ಕೃಪಾಂಕ ಕೊಟ್ಟು ನೇರ ನೇಮಕ ಮಾಡಿಕೊಳ್ಳಲು ತೀರ್ವನ.
  • 64 ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಲು ತೀರ್ವನ. ವೈಯಕ್ತಿಕ ಪ್ರಕರಣ ಹಿಂಪಡೆದಿಲ್ಲ. ಹುಣಸೂರು 16 ಕೇಸ್, ಬೆಳಗಾವಿ ದೊಂಬಿ ಮತ್ತಿತರ ಪ್ರಕರಣಗಳು ಹಿಂದಕ್ಕೆ.
  • 2615 ಘೋಷಿತ ಕೊಳಗೇರಿಯ 7.40 ಲಕ್ಷ ಕುಟುಂಬಗಳಿಗೆ 600 ಚ.ಅಡಿಯಿಂದ 1,200 ಚ.ಅಡಿ ವಿಸ್ತೀರ್ಣದ ವಾಸದ ಮನೆಗೆ ರಿಯಾಯಿತಿ ದರ ನಿಗದಿಪಡಿಸಿ ಹಕ್ಕುಪತ್ರ ನೀಡಲು ನಿರ್ಧಾರ.
  • ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಷೇರು ಬಂಡವಾಳವನ್ನು 1000 ಕೋಟಿ ರೂ.ಗಳಿಂದ 1,250 ಕೋಟಿ ರೂ.ಗೆ ಹೆಚ್ಚಿಸಲು ಒಪ್ಪಿಗೆ.
  • ಬಿ ಕರಾಬು ಹೊಂದಿರುವ ಭೂಮಿಯನ್ನು ಸ್ವಾಧೀನ ಹೊಂದಿರುವವರಿಗೆ ಮಾರ್ಗಸೂಚಿ ದರದ ನಾಲ್ಕುಪಟ್ಟು ದರ ನಿಗದಿ ಮಾಡಿ ಭೂಮಿ ನೀಡಲು ತೀರ್ವನ.
  • ಸುಗ್ರೀವಾಜ್ಞೆ ಹೊರಡಿಸಿರುವ ಕಾಯ್ದೆಗಳಿಗೆ ಒಪ್ಪಿಗೆ
  • ಚಿಕ್ಕಮಗಳೂರು ಜಿಲ್ಲೆಯ ತೇಗೂರು ಗ್ರಾಮದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವಸತಿ ಸಮುಚ್ಚಯ ನಿರ್ವಣಕ್ಕೆ 174 ಕೋಟಿ ರೂ. ಯೋಜನೆಗೆ ಅನುಮೋದನೆ.
  • ಮೈಸೂರಿನ ವಾಗ್ದೇವಿ ಸದ್ವಿದ್ಯಾವರ್ಧಿನಿ ಟ್ರಸ್ಟ್​ಗೆ ಗುತ್ತಿಗೆ ಆಧಾರದ ಮೇಲೆ ಇಲವಾಲ ಹೋಬಳಿಯಲ್ಲಿ 4.20 ಎಕರೆ ಜಮೀನು ಮಂಜೂರು ಮಾಡಲು ಸಮ್ಮತಿ
  • ಶಿವಮೊಗ್ಗ ನಗರದ ಉತ್ತರ ಭಾಗದ ರಿಂಗ್ ರಸ್ತೆ ಭೂ ಸ್ವಾಧೀನಕ್ಕೆ 100 ಕೋಟಿ ರೂ. ಮಂಜೂರು.

ಬೆಳೆ ಸಮೀಕ್ಷೆ ಗಡುವು ವಿಸ್ತರಣೆ

ದೇಶದಲ್ಲಿ ಮೊದಲ ಬಾರಿಗೆ ರೈತರೇ ಜಮೀನಿನಲ್ಲಿ ನಿಂತು ಫೋಟೋ ತೆಗೆಸಿಕೊಂಡು ಬೆಳೆ ಮಾಹಿತಿ ನೀಡುವ ಬೆಳೆ ಸಮೀಕ್ಷೆ ಆಪ್ ಅನ್ನು ಕಂದಾಯ ಇಲಾಖೆ ರೂಪಿಸಿದೆ. ರೈತರು ಈ ಆಪ್​ಗೆ ಮಾಹಿತಿ ಅಪ್​ಲೊಡ್ ಮಾಡಬೇಕಿದೆ. ಈಗಾಗಲೇ 5 ಲಕ್ಷಕ್ಕೂ ಹೆಚ್ಚು ರೈತರು ಆಪ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಅಪ್​ಲೋಡ್ ಮಾಡುವ ಪ್ರಕ್ರಿಯೆಗೆ ಆ.24 ಕೊನೆಯ ದಿನವಾಗಿತ್ತು. ಈ ಅವಧಿಯನ್ನು ಒಂದು ತಿಂಗಳು ಅಂದರೆ ಸೆ.24ರ ವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.