ಜಿಲ್ಲೆ

ಕುಂಚಿಟಿಗರನ್ನು ಒಬಿಸಿಗೆ ಸೇರಿಸಲು ಕೆಂದ್ರಕ್ಕೆ ಶಿಫಾರಸು

ಧನಂಜಯ ಎಸ್.ಹಕಾರಿ.

ಹೊಸದುರ್ಗ: ಕುಂಚಿಟಿಗರನ್ನು ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ ರಾಜ್ಯ ಸರ್ಕಾರಕ್ಕೆ ಸಮಾಜದ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಕುಂಚಿಟಿಗ ಗುರುಪೀಠದಲ್ಲಿ ಸೋಮವಾರ ಮಾತನಾಡಿ, ಕುಂಚಿಟಿಗರಿಗೆ ಮೀಸಲಾತಿ ಕಲ್ಪಿಸಲು ಸಹಕಾರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,

ಡಿಸಿಎಂ ಡಿ.ಕೆ.ಶಿವಕುಮಾರ್, ಶಾಸಕ ಟಿ.ಬಿ.ಜಯಚಂದ್ರ, ಎಂಎಲ್‌ಸಿ ಕೆ.ಎಸ್.ನವೀನ್, ಮಾಜಿ ಸಚಿವ ಎಚ್.ಆಂಜನೇಯ, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಸಂಸದ ಮುದ್ದಹನುಮೇಗೌಡ, ಮುರಳೀಧರ ಹಾಲಪ್ಪ, ಎಸ್.ಲಿಂಗಮೂರ್ತಿ ಅವರ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಲಿದ್ದೇವೆ ಎಂದರು.

ಸಮಾಜದ ಸಂಘಟನೆ, ಸಂಸ್ಕಾರ ಹಾಗೂ ಮೀಸಲಾತಿ ಸೌಲಭ್ಯದ ಸಂಕಲ್ಪದೊಂದಿಗೆ 1990 ರಿಂದ ಪ್ರತಿವರ್ಷ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗ ಸಮಾವೇಶ ನಡೆಸಲಾಗುತ್ತಿದೆ.

1997ರಲ್ಲಿ ಕುಂಚಿಟಿಗ ಸಂಸ್ಥಾನ ಮಠ ಸ್ಥಾಪಿಸುವ ಮೂಲಕ ಸಮಾಜ ಸಂಘಟನೆಗೆ ಒತ್ತು ನೀಡಲಾಯಿತು. ಸತತವಾದ ಪ್ರಯತ್ನದಿಂದ ಕೇಂದ್ರಕ್ಕೆ ಮೀಸಲಾತಿ ಪ್ರಸ್ತಾವನೆ ರವಾನೆಯಾಗಿದೆ ಎಂದರು.

ಕುಂಚಿಟಿಗ ಸಮಾಜಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವ ಕುಲಶಾಸ್ತ್ರೀಯ ಅಧ್ಯಯನದ ವರದಿ ಕೇಂದ್ರ ಸರ್ಕಾರಕ್ಕೆ ರವಾನೆಯಾಗಿದೆ. ಕೇಂದ್ರ ಮಂತ್ರಿಗಳು ಹಾಗೂ ಸಂಸದರನ್ನು ಭೇಟಿ ಮಾಡಿ ಪ್ರಸ್ತಾವನೆಗೆ ಒಪ್ಪಿಗೆ ನೀಡಲು ಒತ್ತಾಯಿಸಬೇಕು ಎಂದು ತಿಳಿಸಿದರು.

ಮೀಸಲಾತಿ ಹೋರಾಟದಲ್ಲಿ ಶ್ರಮಿಸಿದ ಕುಂಚಿಟಿಗ ಸಮಾಜದ ಎಲ್ಲ ಸಂಘಟನೆಗಳಿಗೂ, ಮುಖಂಡರಿಗೂ ಅಭಿನಂದನೆಗಳು. ನಿಮ್ಮ ಹೋರಾಟ ಹಾಗೂ ಬೆಂಬಲ ಸಮಾಜಕ್ಕೆ ನಿರಂತರವಾಗಿರಬೇಕು ಎಂದು ಮನವಿ ಮಾಡಿದರು.