ಸಾಗರ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲಿಸಿದರು. ಹರೀಶ್, ಬಿ.ಎಸ್.ಹರಿಕೃಷ್ಣ, ಚೇತನರಾಜ್ ಕಣ್ಣೂರು ಇತರರಿದ್ದರು. 
ಜಿಲ್ಲೆ

ಶಿಕ್ಷಣ, ಆರೋಗ್ಯಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು: ಶಾಸಕ ಬೇಳೂರು

ಸಾಗರ: ನಮ್ಮ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಯೋಜನೆಗಳು ವ್ಯವಸ್ಥಿತವಾಗಿ ಜನರಿಗೆ ತಲುಪುವಂತೆ ಅಧಿಕಾರಿಗಳು ಗಮನಹರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 3.5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ವೀಕ್ಷಿಸಿ ಮಾತನಾಡಿ, ಕರ್ನಾಟಕ ಗೃಹ ಮಂಡಳಿ ಮತ್ತು ರೈಟ್ ಸಂಸ್ಥೆ ಕಾಮಗಾರಿ ನಡೆಸುತ್ತಿದ್ದು ಮುಕ್ತಾಯದ ಹಂತದಲ್ಲಿದೆ. 9 ಕೊಠಡಿ, 4 ಲ್ಯಾಬ್ ಹಾಗೂ ಹೆಚ್ಚುವರಿ ಕೊಠಡಿಗಳನ್ನು ಕಟ್ಟಲಾಗಿದೆ. ಕಾಲೇಜಿಗೆ ಅವಶ್ಯವಿರುವ ಸುಸಜ್ಜಿತ ಕ್ಯಾಂಟೀನ್, ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ ಮುಂತಾದ ಅಗತ್ಯಗಳ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿ ಜತೆ ಚರ್ಚಿಸಿ ಅನುದಾನಕ್ಕಾಗಿ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು ಎಂದರು.
ಸಾಗರ ಕ್ಷೇತ್ರ ವ್ಯಾಪ್ತಿಯಲ್ಲಿ ಈಚೆಗೆ ಮೇಲ್ದರ್ಜೆಗೇರಿದ ಜಿಲ್ಲಾ ಮುಖ್ಯರಸ್ತೆಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ಲೋಕೋಪಯೋಗಿ ಸಚಿವರಿಗೆ ಅನುದಾನ ನೀಡುವಂತೆ ಕೋರಿದ್ದೇವೆ. ಅದರಲ್ಲಿ ಹೊಸನಗರ ತಾಲೂಕಿನ ಗೌರಿಕೆರೆ, ಬೆನ್ನಟ್ಟೆ ಗುತ್ಯಮ್ಮ ದೇವಸ್ಥಾನದ ರಸ್ತೆ ಡಾಂಬರೀಕರಣಕ್ಕೆ 2 ಕೋಟಿ ರೂ., ಕರೂರು ಹೋಬಳಿಯ ಹೊನಗಲು- ಬೊಬ್ಬಿಗೆ-ಹಳ್ಳಿ, ಸುಳ್ಳಳ್ಳಿ ರಸ್ತೆ ಡಾಂಬರೀಕರಣಕ್ಕೆ 100 ಕೋಟಿ ರೂ. ಅನುದಾನ ಕೋರಲಾಗಿದೆ. ಭಟ್ಕಳ, ಸೊರಬ ಎನ್.ಎಚ್-50 ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಿಆರ್‌ಐಎಫ್ ಯೋಜನೆಯಡಿ 6 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಗೃಹ ಮಂಡಳಿ ಶಿವಮೊಗ್ಗ ಉಪವಿಭಾಗದ ಎಇಇ ಹರೀಶ್, ಬಿ.ಎಸ್.ಹರಿಕೃಷ್ಣ, ಚೇತನರಾಜ್ ಕಣ್ಣೂರು, ಟಿ.ಪಿ.ರಮೇಶ್, ಪ್ರಾಚಾರ್ಯ ಸಣ್ಣಹನುಮಪ್ಪ ಇತರರಿದ್ದರು.

ವೈದ್ಯರ ನಡೆಗೆ ಕಿಡಿ
ಸಾಗರ ಉಪವಿಭಾಗೀಯ ಆಸ್ಪತ್ರೆ ಮತ್ತು ತಾಯಿ-ಮಗು ಆಸ್ಪತ್ರೆಯಲ್ಲಿ ಹೊರ ರೋಗಿಗಳನ್ನು ತಪಾಸಣೆ ಮಾಡಲು ವೈದ್ಯರು ನಿಗದಿತ ಸಮಯಕ್ಕೆ ಬರುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ವೈದ್ಯರು ಖಾಸಗಿ ಕ್ಲಿನಿಕ್‌ಗಳಿಗೆ ಕೊಡುವಷ್ಟು ಗಮನವನ್ನು ಆಸ್ಪತ್ರೆಗಳಿಗೆ ನೀಡುತ್ತಿಲ್ಲ. ಬಹುತೇಕರು ಕೇಂದ್ರ ಸ್ಥಾನದಲ್ಲಿಲ್ಲದೆ ಶಿವಮೊಗ್ಗದಿಂದ ಸಾಗರಕ್ಕೆ ಓಡಾಡುತ್ತಿದ್ದಾರೆ. ಎಲ್ಲ ವೈದ್ಯರು ಕೇಂದ್ರ ಸ್ಥಾನದಲ್ಲಿದ್ದೇ ಶುಶ್ರೂಷೆ ಮಾಡಬೇಕು. ಈ ಎಲ್ಲ ಸಮಸ್ಯೆಗಳ ವರದಿ ತರಿಸಿಕೊಂಡಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೂ ಫೋನ್‌ನಲ್ಲಿ ಶಾಸಕರು ಸೂಚನೆ ನೀಡಿದರು.