ಮೈಸೂರು: ರಾಜ್ಯದಲ್ಲಿ ಆಡಳಿತಯಂತ್ರ ಸಂಪೂರ್ಣ ಕುಸಿದಿದ್ದು, ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದವರು ದಿನ ಬೆಳಗಾದರೆ ಕಚ್ಚಾಟದಲ್ಲಿ ತೊಡಗಿದ್ದಾರೆ. ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುವ ಕಡೆಗೆ ಅವರು ಗಮನ ಹರಿಸುತ್ತಿದ್ದಾರೆಯೇ ಹೊರತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗೋಜಿಗೆ ಹೋಗುತ್ತಿಲ್ಲ. ರಾಜ್ಯದಲ್ಲಿ ಮಳೆ ಬಂದು ರೈತರ ಬೆಳೆಗಳು ನಷ್ಟವಾಗಿದೆ. ರೈತರಿಗೆ ಯಾವ ಪ್ರಮಾಣದಲ್ಲಿ ಬೆಳೆ ಪರಿಹಾರ ಕೊಡಬೇಕೆಂದು ಚಿಂತನೆಯನ್ನೇ ಮಾಡದೆ ಸರ್ಕಾರ ಕಾಲಾಹರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಕಾಂಗ್ರೆಸ್ ಶಾಸಕರನ್ನೇ ನೀವು ಪ್ರಶ್ನಿಸಬೇಕು. ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರ ಆಗುತ್ತದೆಯೇ ಇಲ್ಲವೋ ಗೊತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಶಾಸಕರಿಗೂ ಸಾಕಷ್ಟು ಗೊಂದಲ ಇದೆ ಎಂದು ಹೇಳಿದರು.
ಉತ್ತರಕರ್ನಾಟಕದ ಭಾಗದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಳೆಯಿಂದಾಗಿ ಆಗಿರುವ ಅನಾಹುತಗಳ ಕುರಿತು ಸರ್ವೆ ಮಾಡಿಲ್ಲ. ಸಚಿವರು ಯಾವುದೇ ಗಮನಹರಿಸಿಲ್ಲ. ಕಾನೂನು ಸುವ್ಯವಸ್ಥೆ ಬಗ್ಗೆ ಹೇಳುವುದೇ ಬೇಡ. ಮೈಸೂರಿನಲ್ಲಿ ಅಮಾಯಕ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ನಡೆದಿರುವ ಘಟನೆ ಮನಸ್ಸಿಗೆ ತುಂಬಾ ನೋವಾಗಿದೆ. ಪೊಲೀಸ್ ಇಲಾಖೆ ನಿಯಂತ್ರಣ ತಪ್ಪಿದೆ ಎಂದು ಆರೋಪಿಸಿದರು.
ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಲು ಯಾವುದೇ ವಿರೋಧವಿಲ್ಲ. ಆದರೆ, ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಇರಕೂಡದು ಎಂಬುದು ನಮ್ಮ ಆಗ್ರಹವಾಗಿದೆ. ಎಂಸಿಡಿಸಿಸಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಯಾವ ರೀತಿ ರಾಜಕೀಯ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಖುದ್ದು ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರೇ ಚುನಾವಣೆಯನ್ನು ಯಾವ ರೀತಿ ನಡೆಸಿದ್ದೇವೆಂದು ಹೇಳಿರುವುದಕ್ಕಿಂತಲೂ ಬೇರೆ ಸಾಕ್ಷಿ ಬೇಕಾಗಿಲ್ಲ. ಎಂಸಿಡಿಸಿಸಿ ಚುನಾವಣೆಯಲ್ಲಿ ನಾವು ಸರಿಯಾದ ಉತ್ತರ ನೀಡಿದ್ದೇವೆ. ಅದು ತಲುಪಬೇಕಾದವರಿಗೆ ತಲುಪಿದೆ. ಕಾಣದ ಕೈಗಳ ಪ್ರಭಾವ ಯಾವ ರೀತಿ ಕೆಲಸ ಮಾಡಿತ್ತು ಎಂಬುದು ನಮಗೆ ಗೊತ್ತಿದೆ ಎಂದರು.
ಸಹಕಾರ ಸಂಘಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸಬೇಕು ಎಂಬುದು ನಮ್ಮ ನಿಲುವು. ಅದಕ್ಕಾಗಿಯೇ ಎಂಸಿಡಿಸಿಸಿಗೆ ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಸರ್ಕಾರದ ಹಸ್ತಕ್ಷೇಪದ ಪರಿಣಾಮ ಮೂರು ಕ್ಷೇತ್ರಗಳ ಚುನಾವಣೆ ವಿಚಾರ ನ್ಯಾಯಾಲಯದಲ್ಲಿದೆ. ಮೂರು ಕ್ಷೇತ್ರಗಳಿಗೆ ಚುನಾವಣೆಯನ್ನೇ ನಡೆಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.