ಜಿಲ್ಲೆ

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಈಶ್ವರಪ್ಪ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತ್ರವಲ್ಲ ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ದಲಿತ, ಹಿಂದುಳಿದವರ ಹಣವನ್ನು ತಿನ್ನುವ ಈ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ವಿಳಾಸವಿಲ್ಲದಂತಾಗುತ್ತದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ವಾಲ್ಮೀಕಿ ನಿಗಮದ ಅಧಿಕಾರಿ ಪತ್ರ ಬರೆದು ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಮ್ಮ ಸಂಘಟನೆಯ ಹೋರಾಟದ ಫಲವಾಗಿ ಮೂರು ದಿನಗಳ ಹಿಂದಷ್ಟೇ ಆ ಅಧಿಕಾರಿಯ ಮಗನಿಗೆ ಸರ್ಕಾರಿ ಕೆಲಸ ದೊರಕಿದೆ ಎಂದರು.

ಕೆಲವೇ ದಿನಗಳ ಹಿಂದೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಈ ಸರ್ಕಾರ 60 ಪರ್ಸೆಂಟ್ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಬಹಿರಂಗ ಆರೋಪ ಮಾಡಿದರೂ ಇದರ ಬಗ್ಗೆ ಯಾವೊಬ್ಬ ಸಚಿವರೂ ಪ್ರತಿಕ್ರಿಯೆ ನೀಡಿಲ್ಲ. ಆರೋಪ ಸುಳ್ಳು ಎಂದೂ ಹೇಳಿಲ್ಲ. ಒಂದು ವೇಳೆ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪ ಸುಳ್ಳಾಗಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಅವರ ಆರೋಪವನ್ನು ಸರ್ಕಾರ ಒಪ್ಪಿಕೊಂಡಂತಾಗಿದೆ ಎಂದು ಅಭಿಪ್ರಾಯಪಟ್ಟರು.

ನನ್ನ ಮೇಲೆ ಆರೋಪ ಬಂದಾಗ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆಗೆ ಒಪ್ಪಿಕೊಂಡು ಕಳಂಕರಹಿತನಾಗಿ ಹೊರಗೆ ಬಂದಿದ್ದೆ. ಆದರೆ ಈ ಸರ್ಕಾರದಲ್ಲಿ ಯಾರೂ ಅಂತಹ ಧೈರ್ಯ ಮಾಡುತ್ತಿಲ್ಲ ಎಂದು ಟೀಕಿಸಿದರು.