ಜಿಲ್ಲೆ

ಒಂದು ಸಮುದಾಯದ ಓಲೈಕೆಯಲ್ಲಿ ನಿರತರಾಗಿರುವ ರಾಜ್ಯ ಸರ್ಕಾರ : ನಿಖಿಲ್ ಕುಮಾರಸ್ವಾಮಿ ಆಕ್ರೋಶ

ಮೈಸೂರು: ರಾಜ್ಯ ಸರ್ಕಾರ ಒಂದು ಸಮುದಾಯವನ್ನು ಓಲೈಕೆ ಮಾಡುವ ಸಲುವಾಗಿ ಮತ್ತೊಂದು ಸಮುದಾಯವನ್ನು ಕೈಬಿಟ್ಟಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂಡ್ಯದ ಜನ ಸಾಕಷ್ಟು ಪ್ರಬುದ್ಧರಿದ್ದು, ಅವರು ನಾಗಮಂಗಲದಲ್ಲಿ ಗಣೇಶೋತ್ಸವ ಸಂದರ್ಭ ನಡೆದ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂಬುದಕ್ಕೆ ನಾಗಮಂಗಲದ ಘಟನೆ ಸಾಕ್ಷಿಯಾಗಿದೆ. ದೇಶದಲ್ಲಿಯೇ ಚರ್ಚೆಗೆ ಗ್ರಾಸವಾಗಿರುವ ಘಟನೆ ಇದಾ ಗಿದೆ. ಇದನ್ನು ರಾಜ್ಯದ ಜನರು ಪ್ರಶ್ನಿಸುತ್ತಿದ್ದು, ನಾಚಿಗೇಡಿನ ಸರ್ಕಾರಕ್ಕೆ ಉತ್ತರ ನೀಡಲು ಉತ್ತರವೇ ಇಲ್ಲ ಎಂದು ಟೀಕಿಸಿದರು.

ನಾಗಮಂಗಲ ಘಟನೆಯ ಹಿಂದೆ ಕೇರಳ ಹಾಗೂ ಬಾಂಗ್ಲ ನಂಟು ಇದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಇವೆಲ್ಲವನ್ನೂ ತಿರುಚುವ ಕಾರ್ಯ ಆಗುತ್ತಿದೆ. ಹಗರಣ, ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರ ಅವರ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಅವರದ್ದೇ ಆದ ಸುದ್ದಿಗಳನ್ನು ಹೊರಡಿಸುತ್ತಿದ್ದು, ಅದರ ಬಗ್ಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದರು.

ಚನ್ನಪಟ್ಟಣ ಉಪ ಚುನಾವಣೆ ವಿಚಾರವಾಗಿ ಸಿ.ಪಿ. ಯೋಗೇಶ್ವರ್ ಅವರ ಪಕ್ಷದವರು ಹಾಗೂ ಬೆಂಬಲಿಗರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ನಾವು ಸಹ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸುತ್ತಿದ್ದು, ಒಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಇನ್ನೂ ಚುನಾವಣೆ ಘೋಷಣೆಯಾಗಿಲ್ಲ, ಹಾಗಾಗಿ ನಾನು ಸ್ಪರ್ಧೆ ಮಾಡುವ ವಿಚಾರ ಅಪ್ರಸ್ತುತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಮುನಿರತ್ನ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಎಫ್‌ಎಸ್‌ಎಲ್ ವರದಿ ಬಂದ ನಂತರ ಧ್ವನಿ ಯಾರದ್ದೆಂಬುದು ಸ್ಪಷ್ಟವಾಗುತ್ತದೆ, ಹಾಗಾಗಿ ಅಲ್ಲಿಯವರೆಗೆ ನಾವೆಲ್ಲ ಕಾಯಬೇಕು. ಆದರೆ, ಪ್ರಕರಣದಲ್ಲಿ ರಾಜ್ಯ ಸರ್ಕಾರ ಧ್ವೇಷದ ರಾಜಕಾರಣ ಮಾಡುತ್ತಿದೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡುತ್ತದೆ. ಆದರೆ, ಈ ನೆಲದ ಕಾನೂನಿಗಿಂತ ಯಾರು ಸಹ ದೊಡ್ಡವರಲ್ಲ, ಹಾಗಾಗಿ ತಪ್ಪಾಗಿದ್ದರೆ ಕಾನೂನಿಗೆ ತಲೆಬಾಗಬೇಕಾಗುತ್ತದೆ ಎಂದರು.