ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ  
ಜಿಲ್ಲೆ

ವರ್ಗಾವಣೆ ದಂಧೆಯಲ್ಲಿ ರಾಜ್ಯ ಸರ್ಕಾರ: ಈಶ್ವರಪ್ಪ ಆರೋಪ

ನವೀನ ಬಿ.ಎಂ

ಶಿವಮೊಗ್ಗ: ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದು ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಶೇ.40 ಪರ್ಸೆಂಟ್‌ಗಿಂತ ಅಧಿಕ ಲಂಚ ಪಡೆಯುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

ವರ್ಗಾವಣೆ ದಂಧೆ ವಿಚಾರವಾಗಿ ಸಿದ್ದರಾಮಯ್ಯ ಅವರು ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿದರೆ 25ಕ್ಕೂ ಅಧಿಕ ಐಎಎಸ್ ಅಧಿಕಾರಿಗಳನ್ನು ಅವರ ಮುಂದೆ ಹಾಜರು ಪಡಿಸುವುದಾಗಿ ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸ್‌ನವರು ಚುನಾವಣಾ ಪೂರ್ವದಲ್ಲಿ ಬಿಜೆಪಿ ಸರ್ಕಾರ ಶೇ.40 ಪರ್ಸೆಂಟ್ ಲಂಚ ಪಡೆಯುತ್ತಿದೆ ಎಂದು ಆರೋಪಿಸಿದ್ದರು. ಆದರೆ ಸರ್ಕಾರ ರಚನೆಯಾಗಿ ನೂರು ದಿನ ಕಳೆದರೂ 40 ಪರ್ಸಂಟ್ ವಿಚಾರದಲ್ಲಿ ಈವರೆಗೆ ಒಂದೇ ಒಂದು ಸಾಕ್ಷೃ ಒದಗಿಸಿಲ್ಲ. ಆದರೆ ಇದೀಗ ಕಾಂಗ್ರೆಸ್‌ನಲ್ಲೇ ಕೇಂದ್ರೀಕೃತ(ಸಿಎಂ ಮತ್ತು ಅವರ ಪುತ್ರ)ವಾಗಿ ಲಂಚ ಪಡೆಯಲಾಗುತ್ತಿದೆ ಎಂದು ದೂರಿದರು.
ಈಗಿನ ಸರ್ಕಾರದಲ್ಲಿ ವರ್ಗಾವಣೆ ದಂಧೆ ವ್ಯಾಪಕವಾಗಿದೆ. ಯತೀಂದ್ರ ಸಿದ್ದರಾಮಯ್ಯ ಭ್ರಷ್ಟಾಚಾರ ಮುಳುಗಿದ್ದಾರೆ. ಈ ಬಗ್ಗೆ ಅನೇಕ ಅಧಿಕಾರಿಗಳು ನನಗೆ ವಾಟ್ಸ್‌ಆ್ಯಪ್ ಕರೆ ಮಾಡಿ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ತೊಂದರೆ ಕೊಡುತ್ತಾರೆಂದು ಅನೇಕ ಅಧಿಕಾರಿಗಳು ಹೆದರುತ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಬೇಸತ್ತು ಹೋಗಿದ್ದಾರೆ. ಸರ್ಕಾರ ನ್ಯಾಯಾಧೀಶರನ್ನು ನೇಮಿಸಿದ್ದಲ್ಲೆ ಆದಲ್ಲಿ ಸಾಕ್ಷೃ ಸಹಿತ ಸಾಬೀತುಪಡಿಸಲಾಗುವುದು. ಕಾಂಗ್ರೆಸ್‌ನವರಂತೆ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುವುದಿಲ್ಲ ಎಂದು ಸವಾಲು ಹಾಕಿದರು.
ಸಿಎಂ ಕ್ಷೇತ್ರ ವರುಣಾದಲ್ಲಿ ಮತಕ್ಕಾಗಿ ಕುಕ್ಕರ್, ಇಸ್ತ್ರಿಪೆಟ್ಟಿಗೆ ಹಂಚಿಕೆ ಮಾಡಿದ್ದು ಲಂಚ ಕೊಟ್ಟು, ಆಮಿಷ ತೋರಿಸಿ ಸಿದ್ದರಾಮಯ್ಯ ಗೆದ್ದಿರುವುದು ಸಾಬೀತಾಗಿದೆ. ಇದನ್ನು ಚುನಾವಣಾ ಆಯೋಗ ತಕ್ಷಣ ಗಂಭೀರವಾಗಿ ಪರಿಗಣಿಸಬೇಕು. ಸಿದ್ದರಾಮಯ್ಯ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಬೇಕು ಎಂದು ಮನವಿ ಮಾಡಿದರು.
ಎಂಎಲ್‌ಸಿ ಡಿ.ಎಸ್.ಅರುಣ್, ವಿಭಾಗ ಪ್ರಭಾರ ಗಿರೀಶ್ ಪಟೇಲ್, ಮಾಜಿ ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವರಾಜ್, ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ, ಮಾಜಿ ಮೇಯರ್ ಸುನೀತಾ ಅಣ್ಣಪ್ಪ, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.