ಜಿಲ್ಲೆ

ಕರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ವಿಫಲ : ಶಾಸಕ ಡಾ.ಪರಮೇಶ್ವರ್ ಟೀಕೆ

ಕೊರಟಗೆರೆ: ಯಾವುದೇ ಚಿಕಿತ್ಸೆ ನೀಡದೇ ಕೇವಲ ಐಸೋಲೇಷನ್, ಕ್ವಾರಂಟೈನ್ ಎಂದು ಪಾಸಿಟಿವ್ ಬಂದವರನ್ನು ಒಂದೆಡೆ ಸೇರಿಸಿದರೆ ಏನು ಪ್ರಯೋಜನ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಹೇಳಿದರು.

ತಾಲೂಕು ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಕರೊನಾ ನಿಯಂತ್ರಣ ಸಂಬಂಧಿತ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಕರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ತಹಸೀಲ್ದಾರ್ ಗೋವಿಂದರಾಜು ತಿಳಿಸುತ್ತಾ, ಯಾವುದೇ ಟ್ರಾವೆಲ್‌ಹಿಸ್ಟರಿ ಇಲ್ಲದೇ ಬಹುತೇಕರಿಗೆ ಕರೊನಾ ಬಂದಿದೆ ಎಂದರು. ಇದಕ್ಕೆ ಸಿಡಿಮಿಡಿಗೊಂಡ ಶಾಸಕ ಟ್ರಾವಲಿಂಗ್ ಹಿಸ್ಟರಿ ಇಲ್ಲದೇ ರೋಗ ಹರಡಲು ಸಾಧ್ಯವಿಲ್ಲ. ಸರಿಯಾಗಿ ನಿಗಾವಹಿಸಿ ಕರ್ತವ್ಯ ನಿರ್ವಹಿಸಿ ಎಂದು ಸೂಚಿಸಿದರು.

ತಹಸೀಲ್ದಾರ್ ಗೋವಿಂದರಾಜು ಮಾತನಾಡಿ, ಸರ್ಕಾರದಿಂದ ಮೊದಲ ಕಂತಿನಲ್ಲಿ 20 ಲಕ್ಷ.ರೂ.ಬಿಡುಗಡೆಯಾಗಿದ್ದು, ಇದರಲ್ಲಿ 14.5 ಲಕ್ಷ ರೂ. ಖರ್ಚು ಮಾಡಿದ್ದೇವೆ. ಇನ್ನೂ 5.5 ಲಕ್ಷ ರೂಪಾಯಿ ಉಳಿದಿದೆ. ಇನ್ನು 25 ಲಕ್ಷ ರೂಪಾಯಿ ತಾಲೂಕಿಗೆ ಬಿಡುಗಡೆಯಾಗಿದ್ದು, ಇನ್ನೂ ಖಾತೆಗೆ ಜಮಾ ಆಗಿಲ್ಲ. ಸೋಂಕಿತರ ಚಿಕಿತ್ಸೆಗೆ 400 ಬೆಡ್ ವ್ಯವಸ್ಥೆ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ ಪಟ್ಟಣದಲ್ಲಿನ 19 ಕಲ್ಯಾಣ ಮಂಟಪಗಳನ್ನು ಗುರುತು ಮಾಡಿಕೊಂಡಿದ್ದೇವೆ ಎಂದರು.

ತಾಲೂಕಿನಲ್ಲಿ ಇದುವರೆವಿಗೂ 36 ಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ ಮೂವರು ಬೇರೆ ತಾಲೂಕಿನವರಾಗಿದ್ದಾರೆ. ಈಗ 33 ಸಕ್ರಿಯ ಪ್ರಕಣಗಳಿದ್ದು, 1750 ಪರೀಕ್ಷೆ ಮಾಡಲಾಗಿದೆ, 500 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದರು. ತಾಲೂಕು ವೈದ್ಯಾಧಿಕಾರಿಗೆ ತರಾಟೆ: ಎಷ್ಟು ಜನರಿಗೆ ಕರೊನಾ ಪರೀಕ್ಷೆ ಮಾಡಲಾಗಿದೆ, ಎಷ್ಟು ವರದಿ ಬಂದಿವೆ ಹಾಗೂ ವರದಿ ಬರುವುದು ಬಾಕಿ ಇವೆ ಎನ್ನುವ ಶಾಸಕರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ವೈದ್ಯಾಧಿಕಾರಿ ಡಾ.ವಿಜಯ್ ಕುಮಾರ್‌ಗೆ ತರಾಟೆ ತೆಗೆದುಕೊಂಡ ಪರಮೇಶ್ವರ್, ರೋಗ ನಿಯಂತ್ರಣಕ್ಕೆ ಸೂಕ್ತ ಮಾಹಿತಿ ಕಲೆ ಹಾಕದೇ ಮತ್ತೆ ಇನ್ನೇನು ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಸರ್ಕಾರ ಎಚ್ಚೆತ್ತುಕೊಳ್ಳಲಿ: ಕರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಕರೊನಾ ಪ್ರಕರಣಗಳು ದಿನೇದಿನೆ ಹೆಚ್ಚತ್ತಿದ್ದು, ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಮುಂದಿನ ದಿನಗಳು ಇನ್ನಷ್ಟು ಕಷ್ಟವಾಗಲಿವೆ. ಮಂತ್ರಿಗಳು ಸರಿಯಾದ ತಾಳಮೇಳವಿಲ್ಲದೆ, ಎಲ್ಲೆಡೆ ಗೊಂದಲವನ್ನು ಸೃಷ್ಟಿಮಾಡಿಕೊಂಡು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಕೋಟ್ಯಂತರ ರೂಪಾಯಿ ದುರುಪಯೋಗವಾಗಿದ್ದು, ಅಕ್ರಮದ ವಾಸನೆ ಸುಳಿಯುತ್ತಿದೆ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಪರಮೇಶ್ವರ್ ಒತ್ತಾಯಿಸಿದರು.

ಎಸಿ ಡಾ. ನಂದಿನಿ ದೇವಿ, ಪಿಡಬ್ಲ್ಯುಡಿ ಇಂಜಿನಿಯರ್ ಗಂಗಾಧರ್ ಮೊದಲಿಯಾರ್, ತಾಪಂ ಇಒ ಶಿವಪ್ರಕಾಶ್, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕುಮಾರ್, ತಾಲೂಕು ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಇದ್ದರು.