ನಾಗರಾಜ ಜುಮ್ಮನ್ನವರ 
ಜಿಲ್ಲೆ

ಸರ್ಕಾರಿ ನೌಕರರ ಮಹಾ ಸಭೆ ಅ.1ರಂದು

ಕೊಪ್ಪಳ: ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಮಹಾಸಭೆಯನ್ನು ಅ.1ರಂದು ನಗರದ ಮಹಾವೀರ ಜೈನ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಉಕ ಭಾಗದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಸಭೆ ಮಾಡುತ್ತಿದ್ದೇವೆ.

ಇರೊಂದಿಗೆ ಸೈಬರ್ ಜಾಗೃತಿ ಮೂಡಿಸುವ ಹಾಸ್ಯ ಕಾರ್ಯಕ್ರಮ ಮತ್ತು ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಾಗಿದೆ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ತಿಳಿಸಿದರು.

ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ.

ಈ ಸಂಬಂಧ ನೌಕರರಿಗೆ ಮಾಹಿತಿ ನೀಡಿದ್ದೇವೆ. ಬೈಲಾದ ಕೆಲ ಉಪ ವಿಧಿಗಳಲ್ಲಿ ತಿದ್ದುಪಡಿ ತರುವ ಉದ್ದೇಶದಿಂದ ಸಭೆ ಆಯೋಜಿಸಿದ್ದೇವೆ.

ನೇರವಾಗಿ ಅಥವಾ ವರ್ಚುವಲ್ ವೇದಿಕೆ ಮೂಲಕ ನೌಕರರು ಭಾಗವಹಿಸಲು ಅವಕಾಶ ಕಲ್ಪಿಸಿದ್ದೇವೆ.

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಾಗತಿಕ ಮಟ್ಟದಲ್ಲಿ ಸೈಬರ್ ಕ್ರೈಂ ಹೆಚ್ಚುತ್ತಿದೆ. ಹೀಗಾಗಿ ಅಕ್ಟೋಬರ್ ತಿಂಗಳನ್ನು ಸೈಬರ್ ಭದ್ರತಾ ಮಾಸವಾಗಿ ಆಚರಿಸಲಾಗುತ್ತಿದೆ.

ಸೈಸೆಕ್ ಸಂಸ್ಥೆ ಹೆಸರಾಂತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ಸುಧಾ ಬರಗೂರು, ವೈ.ವಿ.ಗುಂಡೂರಾವ್, ಎಂ.ಎಸ್.ನರಸಿಂಹಮೂರ್ತಿ, ಎಚ್.ದುಂಡಿರಾಜ, ಬಸವರಾಜ ಮಹಾಮನಿ ಅವರನ್ನು ಒಳಗೊಂಡು ತಂಡ ರಚಿಸಿದೆ.

ಹಾಸ್ಯದ ಮೂಲಕ ಸೈಬರ್ ವಂಚನೆ ಜಾಗೃತಿ ಮೂಡಿಸುತ್ತಿದೆ. ಇದೇ ತಂಡ ಅ.1ರ ಸಂಜೆ 5 ಗಂಟೆಗೆ ಹಾಸ್ಯ ಸಂಜೆ ನಡೆಸಿಕೊಡಲಿದ್ದು, ನೌಕರರು ಕುಟುಂಬ ಸಮೇತ ಭಾಗವಹಿಸುವಂತೆ ಮನವಿ ಮಾಡಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಶಂಕರಗೌಡ ಮಾಲಿ ಪಾಟೀಲ್, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ರಾಜ್ಯ ಪರಿಷತ್ ಸದಸ್ಯ ಗೋಪಾಲ ದುಬೆ, ಜಿಲ್ಲಾ ಗೌರವ ಅಧ್ಯಕ್ಷ ಸುಧಾಕರ್ ಡಿ.ಜೆ. ಇತರರಿದ್ದರು.

ಜಿಲ್ಲೆಯ ನೂತನ ಸಚಿವ, ಶಾಸಕರಿಗೆ ನಮ್ಮ ಸಂಘದಿಂದ ಸನ್ಮಾನಿಸಲಾಗುವುದು. ಜತೆಗೆ ನೌಕರರ ಪ್ರತಿಭಾವಂತ ಮಕ್ಕಳಿಗೂ ಪುರಸ್ಕರಿಸಲಾಗುವುದು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದಾರೆ. ಶಾಸಕರು, ಸಂಸದರು ಜಿಲ್ಲಾಮಟ್ಟದ ಅಧಿಕಾರಿಗಳು ಇತರರು ಭಾಗಿಯಾಗಲಿದ್ದಾರೆ. -ನಾಗರಾಜ ಜುಮ್ಮನ್ನವರ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಕೊಪ್ಪಳ.
-ನಾಗರಾಜ ಜುಮ್ಮನ್ನವರ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಕೊಪ್ಪಳ.