ಶಿವಮೊಗ್ಗ: ಗೋವುಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಸದಾ ಬದ್ಧವಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬ ತಾಲೂಕಿನ ಕುಬಟೂರಿಯಲ್ಲಿ ಭಾನುವಾರ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಸಹಯೋಗದೊಂದಿಗೆ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿ ಕಾಲು ಬಾಯಿ ಹಾಗೂ ಚರ್ಮ ಗಂಟು ರೋಗ ಲಸಿಕೆ ಅಭಿಯಾನದ 7ನೇ ಸುತ್ತಿನ ಪೋಸ್ಟರ್ ಅನಾವರಣಗೊಳಿಸಿ ಮಾತನಾಡಿದ ಅವರು, ಏ.21ರಿಂದ ಜೂನ್ 4ರವರೆಗೆ ರಾಜ್ಯಾದ್ಯಂತ 45 ದಿನಗಳ ಕಾಲ ಲಸಿಕೆ ಅಭಿಯಾನ ನಡೆಯಲಿದೆ ಎಂದರು.
ಸಾರ್ವಜನಿಕರು ಉಚಿತ ಲಸಿಕೆ ಅಭಿಯಾನದ ಲಾಭ ಪಡೆದುಕೊಳ್ಳಬೇಕು. ತಮ್ಮ ಜಾನುವಾರುಗಳಿಗೆ ಕಾಲು ಬಾಯಿ ರೋಗ ಹಾಗೂ ಚರ್ಮ ಗಂಟು ರೋಗ ಎರಡರ ವಿರುದ್ಧ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಅಭಿಯಾನವನ್ನು ಬೆಂಬಲಿಸಬೇಕೆಂದು ಹೇಳಿದರು.
ಕಾಲು ಬಾಯಿ ರೋಗ ಹಾಗೂ ಚರ್ಮ ಗಂಟು ರೋಗಕ್ಕೆ ಒಳಗಾಗುವ ಎಲ್ಲ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ. ಪಶುವೈದ್ಯಕೀಯ ಇಲಾಖೆಯ ಸಿಬ್ಬಂದಿ ನಿಮ್ಮ ಗ್ರಾಮಕ್ಕೆ ಭೇಟಿ ಲಸಿಕೆ ಹಾಕುತ್ತಾರೆ. ಅವರೊಂದಿಗೆ ಸಹಕರಿಸಿ ಮತ್ತು ನಿಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಂಡು ಈ ರೋಗಗಳಿಂದ ಗೋವುಗಳನ್ನು ರಕ್ಷಿಸಿಕೊಳ್ಳುವಂತೆ ಸಲಹೆ ನೀಡಿದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಶಿವಮೊಗ್ಗ ಜಿಲ್ಲೆಯಲ್ಲಿ 5 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿ ಹೊಂದಿದೆ. ಜಾನುವಾರು ಸಾಕಾಣಿಕೆದಾರರು ಎದುರಿಸಲು ಉಪಯೋಗಪಡಿಸಿಕೊಳ್ಳಿ ಎಂದರು. ಪಶುಪಾಲನ ಇಲಾಖೆ ಉಪ ನಿರ್ದೇಶಕ ಡಾ. ಬಾಬುರತ್ನ ಮತ್ತಿತರರಿದ್ದರು.