ಜಿಲ್ಲೆ

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಾಳೆ

ಶಶಿಧರ ಎಲ್

ಯಲಬುರ್ಗಾ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿವೆ. ಬಿತ್ತಿದ ಬೆಳೆಗಳು ಮಳೆ ಇಲ್ಲದೆ ಹಾನಿಯಾಗಿದ್ದು, ಬರಪೀಡಿತ ತಾಲೂಕುಗಳೆಂದು ಘೋಷಿಸಲು ಮೀನಮೇಷ ಎಣಿಸುತ್ತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಆರೋಪಿಸಿದರು.

ಮಳೆ ಕೊರತೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಜಾನುವಾರುಗಳ ರಕ್ಷಣೆ ಸವಾಲಾಗಿದೆ. ಬರ ಘೋಷಿಸದೆ ಇನ್ನೊಮ್ಮೆ ಬೆಳೆ ಸಮೀಕ್ಷೆ ಮಾಡುತ್ತೇವೆಂದು ಹೇಳುವ ಇವರಿಗೆ ರೈತರ ಉದ್ಧಾರ ಬೇಕಿಲ್ಲ.

ಕಾಂಗ್ರೆಸ್ ಕೇವಲ ಗ್ಯಾರಂಟಿ ಯೋಜನೆಗಳ ಪ್ರಚಾರ ಪಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರದ ವೈಫಲ್ಯ ಖಂಡಿಸಿ ಸೆ.8ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಪಟ್ಟಣದ ಬಿಜೆಪಿ ಕಚೇರಿಯಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಜಾರಿಗೊಳಿಸಿದ ಅನೇಕ ಜನಪರ ಯೋಜನೆಗಳನ್ನು ಈಗಿರುವ ಕಾಂಗ್ರೆಸ್ ಸರ್ಕಾರ ರದ್ದು ಮಾಡಿದೆ. ಶಕ್ತಿ ಯೋಜನೆ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಎದುರಿಸುತ್ತಿರುವ ಅಪಮರ್ಪಕ ಸಾರಿಗೆ ವ್ಯವಸ್ಥೆಯ ಸಮಸ್ಯೆ ಸರ್ಕಾರಕ್ಕೆ ಅರ್ಥವಾಗುತ್ತಿದೆಯೇ?

ಗೋಶಾಲೆ, ಪಿಎಂ ಕಿಸಾನ್, ರೈತ ವಿದ್ಯಾನಿಧಿ, ಭೂಸಿರಿ ಯೋಜನೆ ರದ್ದು ಮಾಡಿರುವ ಕಾಂಗ್ರೆಸ್ ರೈತ ವಿರೋಧಿ ಸರ್ಕಾರವಾಗಿದೆ. ಇವರಿಗೆ ಬಡವರು, ರೈತರು, ಮಕ್ಕಳ ಉದ್ಧಾರ ಬೇಕಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಸಂಗತಿ ಎಂದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಬಿಜೆಪಿ ಸರ್ಕಾರದಲ್ಲಿ 5 ಲಕ್ಷ ರೂ. ಪರಿಹಾರ ಕೊಟ್ಟಿದ್ದಕ್ಕಾಗಿ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿವೆ ಎಂಬ ಬಾಲಿಶತನದ ಹೇಳಿಕೆ ಸರಿಯಲ್ಲ. ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂಬ ಶಾಸಕ ರಾಯರಡ್ಡಿ ಹೇಳಿಕೆ ಅವರ ಅಸಹಾಯಕತೆಗೆ ಸಾಕ್ಷಿ ಎಂದರಲ್ಲದೆ, ಅವರ ಬಗ್ಗೆ ಮರುಕ ಉಂಟಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಪ್ರಮುಖರಾದ ಸಿ.ಎಚ್.ಪಾಟೀಲ್, ವೀರಣ್ಣ ಹುಬ್ಬಳ್ಳಿ, ಸುಧಾಕರ ದೇಸಾಯಿ, ಶರಣಪ್ಪ ಈಳಿಗೇರ್, ಅಯ್ಯನಗೌಡ ಕೆಂಚಮ್ಮನವರ್, ಮಾರುತಿ ಗಾವರಾಳ, ಅಮರೇಶ ಹುಬ್ಬಳ್ಳಿ, ಶಿವಕುಮಾರ ನಾಗಲಾಪುರಮಠ, ಕಳಕಪ್ಪ ತಳವಾರ್, ಅಮಾತೆಪ್ಪ ಇದ್ದರು.