ಮಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನರ ರಕ್ತ ಹೀರುವ ಪ್ರಯತ್ನ ಮಾಡುತ್ತಿದೆ. ಒಂದು ವರ್ಷದಿಂದ ಅನುದಾನ ಬಿಡುಗಡೆಯಾಗದೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಶಾಸಕ ಡಾ. ಭರತ್ ಶೆಟ್ಟಿ ಆರೋಪಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬೆಲೆ ಏರಿಕೆಯನ್ನು ವಿರೋಧಿಸಿ ಎಲ್ಲ ಮಂಡಲ ವ್ಯಾಪ್ತಿಯಲ್ಲಿ ಜೂ.20ರಂದು ರಾಸ್ತಾ ರೋಕೋ ಪ್ರತಿಭಟನೆ ಆಯೋಜಿಸಲಾಗಿದೆ. ತಮ್ಮ ವಿಧಾನಸಭಾ ವ್ಯಾಪ್ತಿಯ ಕುಳಾಯಿ ಹೊನ್ನಕಟ್ಟೆಯಲ್ಲಿ ಸಂಜೆ 4 ಗಂಟೆಗೆ ರಾಸ್ತಾರೋಕೋ ನಡೆಯಲಿದೆ ಎಂದರು.
ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಮಂಡಲ ಮಟ್ಟದ ಪ್ರತಿಭಟನೆಯ ಬಳಿಕವೂ ಬೆಲೆ ಏರಿಕೆ ಹಿಂಪಡೆಯದಿದ್ದರೆ ಮುಂದೆ ಮತ್ತಷ್ಟು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅವರು ಹೇಳಿದರು.
ರಾಜ್ಯದ ಖಜಾನೆ ಖಾಲಿ ಆಗಿದೆ ಎಂದು ಆರೋಪಿಸಿದ ಡಾ. ಭರತ್ ಶೆಟ್ಟಿ,ಸರ್ಕಾರದ ಆ್ಯಂಬುಲೆನ್ಸ್ ಚಾಲಕರಿಂದ ಹಿಡಿದು ಜಲಮಂಡಳಿ ಅಧಿಕಾರಿಗಳಿವರೆಗೆ ವೇತನ ನೀಡಲು ಹಣವಿಲ್ಲ. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 490 ಹತ್ಯೆಗಳು, 198 ಅತ್ಯಾಚಾರ ಪ್ರಕರಣ ದಾಖಲಾಗುವ ಮೂಲಕ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಹಿಂದಿನ ಸರ್ಕಾರ ಪೆಟ್ರೋಲ್ ಡೀಸೆಲ್‌ನ ಸೆಸ್ ಒಂದು ರೂ. ಹೆಚ್ಚು ಮಾಡಿದಾಗ ಸಿದ್ಧರಾಮಯ್ಯ ಅವರು ಅಂದು ಇದರಿಂದ ಜನಸಾಮಾನ್ಯರ ಬದುಕು ಹಾಳಾಗುತ್ತದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂದು ಭಾಷಣ ಬಿಗಿದಿದ್ದರು. ಆದರೆ ಇದೀಗ ಅವರೇ 3 ರೂ. ಏರಿಕೆ ಮಾಡಿದ್ದಾರೆ ಎಂದು ಡಾ. ಭರತ್ ಶೆಟ್ಟಿ ಆರೋಪಿಸಿದರು.
ಬೆಂಗಳೂರಿನಲ್ಲಿ 25000 ಎಕರೆ ಸರ್ಕಾರಿ ಭೂಮಿಯನ್ನು ರಿಯಲ್ ಎಸ್ಟೇಟ್‌ಗಳಿಗೆ ಮಾರಾಟಕ್ಕೆ ಸರ್ಕಾರ ಮುಂದಾಗಿದೆ. ತೆರಿಗೆ ಸಂಗ್ರಹದಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಶ್ವೇತ ಪತ್ರ ಹೊರಡಿಸಲಿ. ಆಗ ಸರ್ಕಾರದ ಹಣಕಾಸು ಸ್ಥಿತಿ ಹೇಗಿದೆ ಎಂಬುದ ಗೊತ್ತಾಗುತ್ತದೆ ಎಂದು ಡಾ.ಭರತ್ ಶೆಟ್ಟಿ ಹೇಳಿದರು.
ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಜಿಲ್ಲಾ ಪ್ರ.ಕಾರ್ಯದರ್ಶಿ ಕಿಶೋರ್ ಪುತ್ತೂರು, ಪದಾಧಿಕಾರಿಗಳಾದ ಸಂದೀಪ್ ಪಚ್ಚನಾಡಿ, ರಣದೀಪ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.