ಮಂಡ್ಯ: ವಿವಾದ, ಸಮಸ್ಯೆಗಳಿಂದಲೇ ಕೂಡಿರುವ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಆಹಾರ ವಿತರಣಾ ಪದ್ಧತಿಯ ಅಧ್ವಾನ ಬಟಾಬಯಲಾಯಿತು. ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹಾಗೂ ಸದಸ್ಯರ ಸಮ್ಮುಖದಲ್ಲಿಯೇ ಅವ್ಯವಸ್ಥೆ ಬೆಳಕಿಗೆ ಬಂದಿತು.
ಆಯೋಗದ ತಂಡ ನಾಲ್ಕು ದಿನ ಜಿಲ್ಲಾ ಪ್ರವಾಸ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಮಿಮ್ಸ್‌ಗೆ ದಿಢೀರ್ ಭೇಟಿ ನೀಡಿದಾಗ ಆಹಾರ ಪದ್ಧತಿ ವ್ಯವಸ್ಥೆಯ ಸಮಸ್ಯೆ ಅನಾವರಣಗೊಂಡಿತು. ಮುಖ್ಯವಾಗಿ ಮುಕ್ತಾಯದ ದಿನಾಂಕವೇ ಇಲ್ಲದ ಬ್ರೇಡ್, ತೀರ ಕಳಪೆ ಮಟ್ಟದ ಅನ್ನ ಮತ್ತು ಸಾಂಬಾರು, ಗುಣಮಟ್ಟವಿಲ್ಲದ ಹಾಲು ವಿತರಣೆ ಮಾಡುತ್ತಿರುವುದು ಆಯೋಗದ ಗಮನಕ್ಕೆ ಬಂತು. ಇನ್ನು ಸಿಬ್ಬಂದಿಯ ಉಢಾಪೆ ಉತ್ತರ ಆಯೋಗದ ಸದಸ್ಯರ ಕೆಂಗಣ್ಣಿಗೆ ಗುರಿಯಾಯಿತು.
ವಿತರಣೆಯಲ್ಲೇ ದೊಡ್ಡ ಲೋಪ: ಆಯೋಗದ ತಂಡ ಮಿಮ್ಸ್‌ನಲ್ಲಿ ಅಡುಗೆ ತಯಾರಿಸುವ ಕೋಣೆಯಲ್ಲಿ ಪರಿಶೀಲನೆ ನಡೆಸಿ ಬಳಿಕ ಅನ್ನ, ಸಾಂಬಾರು ಹಾಗೂ ಹಾಲು, ಬ್ರೇಡ್ ಗುಣಮಟ್ಟವನ್ನು ನೋಡಿದರು. ಬಳಿಕ ರೋಗಿಗಳ ಬಳಿಗೆ ಹೋಗಿ ಮಾಹಿತಿ ಕೇಳಿದಾಗ ಸತ್ಯಾಂಶ ಹೊರಬಿತ್ತು. ಸತ್ವವಿಲ್ಲದ ಆಹಾರ ಕೊಡುತ್ತಾರೆ. ರುಚಿಯೂ ಇರುವುದಿಲ್ಲ. ಕಾಟಾಚಾರವೆಂಬಂತೆ ಊಟ ವಿತರಣೆ ಮಾಡಲಾಗುತ್ತಿದೆ. ಕೇಳಿದವರಿಗೆ ಅನ್ನ ಮತ್ತು ಸಾಂಬಾರು ಕೊಡುವುದಿಲ್ಲ. ಕಿಟಕಿಯಲ್ಲಿ ಮಾಹಿತಿ ಕೇಳಿಕೊಂಡು ಹೊರಟುಹೋಗುತ್ತಾರೆಂದು ಗಂಭೀರ ಆರೋಪ ಮಾಡಿದರು.
ಈ ವೇಳೆ ಎಷ್ಟು ಜನ ರೋಗಿಗಳಿಗೆ ಊಟ ವಿತರಣೆಯಾಗುತ್ತಿದೆ ಎಂದು ಸ್ಥಳದಲ್ಲಿಯೇ ಇದ್ದ ಸಿಬ್ಬಂದಿಯನ್ನು ಆಯೋಗದ ಸದಸ್ಯರು ವಿಚಾರಿಸಿದಾಗ, ಸಮರ್ಪಕ ಉತ್ತರವೇ ಸಿಗಲಿಲ್ಲ. ಇದರಿಂದಾಗಿ ರೋಗಿಗಳ ಸಂಖ್ಯೆಗೂ ವಿತರಣೆಯಾಗುತ್ತಿರುವ ಊಟದ ಪ್ರಮಾಣಕ್ಕೆ ವ್ಯತ್ಯಾಸವಿರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಮಿಮ್ಸ್ ಆಡಳಿತ ಮಂಡಳಿ ಸಭೆ ಕರೆದು ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಎಷ್ಟೋ ಜನರಿಗೆ ಉಚಿತವಾಗಿ ಊಟ ವಿತರಣೆಯಾಗುತ್ತಿದೆ ಎನ್ನುವ ಮಾಹಿತಿ ಇಲ್ಲ. ಇದು ಮಿಮ್ಸ್ ವ್ಯವಸ್ಥೆಯನ್ನು ತೋರಿಸುತ್ತಿದೆ ಎಂದು ಡಾ.ಎಚ್.ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.
ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್‌ರಾವ್, ಮಾರುತಿ ಎಂ.ದೊಡ್ಡಲಿಂಗಣ್ಣ, ರೋಹಿಣಿ ಪ್ರಿಯ, ಕೆ.ಎಸ್. ವಿಜಯಲಕ್ಷ್ಮೀ ಇದ್ದರು.