ಮಂಡ್ಯ: ಮೂರು ದಿನ ಜಿಲ್ಲೆಯಲ್ಲಿ ನಡೆಸಿದ ಪ್ರವಾಸದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ ಕಂಡುಬಂದಿವೆ. ಈ ಕುರಿತಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಬಳಿಕ ಮಾತನಾಡಿದ ಅವರು, ಆಯೋಗದ ವ್ಯಾಪ್ತಿಗೆ 14 ಇಲಾಖೆ ಸೇರಲಿದೆ. ಅಂತೆಯೇ ನಮ್ಮ ತಂಡ ಇಲಾಖಾವಾರು ಭೇಟಿ ನೀಡಿದಾಗ ಗಂಭೀರ ನ್ಯೂನ್ಯತೆ ಎದುರಾದವು. ಮುಖ್ಯವಾಗಿ ಹಳೇಬೂದನೂರಿನಲ್ಲಿರುವ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರ, ಪಾಂಡವಪುರ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಶಾಖೆ, ದೊಡ್ಡಬ್ಯಾಡರಹಳ್ಳಿ ಪಿಎಸಿಎಸ್ ಸಂಘದಲ್ಲಿ ಅವ್ಯವಹಾರ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿನ ಕೆಲ ಸಿಬ್ಬಂದಿಯನ್ನು ಅಮಾನತು ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸದ ಮೊದಲ ದಿನ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಗೆ ಭೇಟಿ ನೀಡಿದಾಗ ಹಲವಾರು ಸಮಸ್ಯೆಗಳು ಕಂಡುಬಂದವು. ಒಳ ರೋಗಿಗಳಿಗೆ ನೀಡುವ ಬ್ರೆಡ್ ಹಾಗೂ ಆಹಾರ ಪದಾರ್ಥ ಗುಣಮಟ್ಟದಿಂದ ಕೂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಹಾರ ನೀಡುವ ಗುತ್ತಿಗೆದಾರರಿಗೆ ಗುಣಮಟ್ಟದ ಆಹಾರ ನೀಡುವಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ವೈದ್ಯರ ಮತ್ತು ಸಿಬ್ಬಂದಿ ಕೊರತೆ ಕಂಡುಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಮಿಮ್ಸ್ ನಿರ್ದೇಶಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಮಿಮ್ಸ್‌ಗೆ ಬರುವ ರೋಗಿಗಳಿಗೆ ಬಡವರಾಗಿದ್ದು, ಅವರಿಗೆ ಉತ್ತಮ ಗುಣಮಟ್ಟದ ಆಹಾರ ನೀಡಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಹಾರದ ಗುತ್ತಿಗೆ ಪಡೆದಿರುವವರು ರೋಗಿಗಳ ಬಳಿ ಹೋಗಿ ಆಹಾರ ನೀಡದೆ ತಳ್ಳುವ ಗಾಡಿ ಮೂಲಕ ನೀಡುತ್ತಿದ್ದು, ರೋಗಿಗಳಿಗೆ ಭಿಕ್ಷುಕರಂತೆ ಆಹಾರ ನೀಡುವುದು ಸರಿಯಾದ ಕ್ರಮವಲ್ಲ ಎಂದು ವೈಧ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್‌ಗೆ ತಾಕೀತು ಮಾಡಲಾಗಿದೆ ಎಂದು ತಿಳಿಸಿದರು.
ಮಂಡ್ಯ ತಾಲೂಕಿನ ಹಳೇಬೂದನೂರು ಗ್ರಾಮದಲ್ಲಿರುವ ಮಂಡ್ಯ ಮತ್ತು ದುದ್ದ ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಹಾಗೂ ತಯಾರಿಕಾ ಕೇಂದ್ರದಲ್ಲಿ 23 ಜನ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಗುಂಪುಗಾರಿಕೆ ಮಾಡಿಕೊಂಡು ಯಾವುದೇ ರೀತಿಯ ಆಹಾರ ತಯಾರಿಸುತ್ತಿರಲಿಲ್ಲ. ಅಲ್ಲದೆ, ಕಳಪೆ ಆಹಾರವನ್ನು ಅಂಗನವಾಡಿಗೆ ಪೂರೈಕೆ ಮಾಡುತ್ತಿರುವುದು ಕಂಡುಬಂತು. ಈ ಹಿನ್ನೆಲೆಯಲ್ಲಿ ಐವರು ನೌಕರರನ್ನು ಅಮಾನತು ಮಾಡಲಾಗಿದೆ. ಮಂಡ್ಯದ ಸ್ವರ್ಣಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮೀದೇವಿ ಅಕ್ಕಿಗಿರಣಿ ಹಾಗೂ ಕಲ್ಲಹಳ್ಳಿಯಲ್ಲಿರುವ ಕಾಳೇಗೌಡ ಅಕ್ಕಿ ಗಿರಣಿಗೆ ಭೇಟಿ ನೀಡಿ ಎಫ್‌ಸಿಐನಿಂದ ಹರಾಜಿನಲ್ಲಿ ಖರೀದಿಸಿರುವ ಅಕ್ಕಿ ಸಂಗ್ರಹದ ಬಿಲ್ ಹಾಗೂ ಗುಣಮಟ್ಟವನ್ನು ಪರಿಶೀಲಿಸಲಾಗಿದೆ ಎಂದರು.
ಪಾಂಡವಪುರದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಶಾಖೆಗೆ ಭೇಟಿ ನೀಡಿ ಹಾಜರಾತಿ ಪುಸ್ತಕ ಪರಿಶೀಲಿಸಲಾಗಿ ಸಿಬ್ಬಂದಿ ತಡವಾಗಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಎಚ್ಚರಿಕೆ ನೀಡಿ ತಹಸೀಲ್ದಾರ್ ಮೂಲಕ ನೋಟೀಸ್ ಜಾರಿ ಮಾಡಲಾಗಿದೆ. ನಂತರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ವಿಭಾಗ, ಹೆರಿಗೆ ವಿಭಾಗ, ಮಹಿಳಾ ವಿಭಾಗ, ಊಟ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಆಹಾರ ಇಲಾಖೆಯ ಉಪನಿರ್ದೇಶಕ ಕೃಷ್ಣಕುಮಾರ್, ಕಾನೂನು ಮಾಪನಾ ಇಲಾಖೆ ಸಹಾಯಕ ನಿಯಂತ್ರಕ ಲಿಂಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.