ಜಿಲ್ಲೆ

ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ

Davangere - Desk - Ganesh M K

ಜಗಳೂರು: ಗ್ರಾಮೀಣ ಪ್ರದೇಶಗಳಿಗೆ ತಾಲೂಕು ಕೇಂದ್ರದಿಂದ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮಹಾತ್ಮಗಾಂಧಿ ಹಳೇ ವೃತ್ತ, ಡಾ. ರಾಜ್‌ಕುಮಾರ್ ರಸ್ತೆ, ಹೊಸ ಬಸ್ ನಿಲ್ದಾಣ, ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಸಂತೋಷ್‌ಕುಮಾರ್‌ಗೆ ಮನವಿ ಸಲ್ಲಿಸಿದರು.
ಜಗಳೂರು ತಾಲೂಕು 178 ಹಳ್ಳಿ ಹೊಂದಿದ್ದು, ಸ್ವಾತಂತ್ರ್ಯ ಪಡೆದು ಏಳು ದಶಕ ಕಳೆದರೂ ಬಹುತೇಕ ಗ್ರಾಮೀಣ ಪ್ರದೇಶಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸದೇ ಇರುವುದು ದುರಂತ. ನಿತ್ಯವೂ ಶಾಲಾ- ಕಾಲೇಜು, ಆಸ್ಪತ್ರೆ, ನೌಕರಿ, ಕೂಲಿ ಮತ್ತಿತರ ಕಾರಣಗಳಿಗಾಗಿ ಹಳ್ಳಿಗಳಿಂದ ಸಾವಿರಾರು ಜನರು ಜಗಳೂರು ಪಟ್ಟಣಕ್ಕೆ ಓಡಾಡುತ್ತಾರೆ. ಗ್ರಾಮಗಳ ಜನರಿಗೆ ಬೈಕ್, ಟ್ರ್ಯಾಕ್ಟರ್, ಆಟೋಗಳೇ ಗತಿಯಾಗಿದೆ. ಆದ್ದರಿಂದ ಪ್ರತಿ ಹಳ್ಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ. ಹೊಳೆ ಚಿರಂಜೀವಿ ಮಾತನಾಡಿ, ಹಳ್ಳಿಗಳಲ್ಲಿ ಆಟೋಗಳೇ ಅನಿವಾರ್ಯ ಎಂಬಂತಾಗಿದೆ. ಶಾಲಾ ಅವಧಿಯಲ್ಲಿ ಆಟೋ ತುಂಬ ಜನರನ್ನು ಹೊತ್ತು ಸಾಗುತ್ತವೆ. ಏನಾದರೂ ಅವಘಡವಾದರೆ ಸಾವು- ನೋವು ಸಂಭವಿಸುತ್ತವೆ. ಇಂತಹ ಅನೇಕ ಘಟನೆಗಳು ನಡೆದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಸಂಘದ ತಾಲೂಕು ಗೌರವಾಧ್ಯಕ್ಷ ದಿಬ್ಬದಹಳ್ಳಿ ಗಂಗಾಧರಪ್ಪ ಮಾತನಾಡಿ, ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಾಣದೆ 2ಕೀ.ಮೀ ದೂರದ ದುರ್ಗಮ ರಸ್ತೆಯಲ್ಲಿ ಕಾಲ್ನಡಿಗೆಯಿಂದ ಆಗಮಿಸಿ ಬಸ್‌ಗಳಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳು, ವಯೋವೃದ್ಧರು, ಮಹಿಳೆಯರು ಬಸವಳಿದು ಹೋಗಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಇತ್ತ ಕಡೆ ಗಮನಹರಿಸಿಲ್ಲ ಎಂದು ದೂರಿದರು.
ತಾಲೂಕಿನ ಕಣ್ವಕುಪ್ಪೆ, ಕೆಳಗೋಟೆ, ಚಿಕ್ಕಬನ್ನಿಹಟ್ಟಿ ಗ್ರಾಮಗಳು ಕೊಂಡಕುರಿ ಅರಣ್ಯ ಪ್ರದೇಶದ ಅಂಚಿನಲ್ಲಿದ್ದು ಸಾರಿಗೆ ವ್ಯವಸ್ಥೆ ಇಲ್ಲ. ಮತ್ತೊಂದೆಡೆ ಕಾಲ್ನಡಿಗೆ ಮೂಲಕ ಸಂಚರಿಸಲು ಕರಡಿ ಮತ್ತಿತರ ವನ್ಯಜೀವಿಗಳ ಹಾವಳಿಯಿಂದ ಭಯದ ವಾತಾವರಣದಲ್ಲಿ ಜನರು ಸಂಚರಿಸಬೇಕಿದೆ. ಕೂಡಲೇ ತಾಲೂಕಿನಲ್ಲಿ ಅಗತ್ಯವಿರುವ ಪ್ರತಿ ಹಳ್ಳಿಗೂ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸದಿದ್ದರೆ ಹೊರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಮುಖಂಡ ಸತೀಶ್‌ಗೌಡ ಗೊಂಡನಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು, ಕಸಬಾ ಹೋಬಳಿ ಅಧ್ಯಕ್ಷ ಶರಣಪ್ಪ, ಮುಖಂಡರಾದ ನಾಗರಾಜ್, ಅಂಜಿನಪ್ಪ, ಪಾಪಣ್ಣ, ಮಂಜಣ್ಣ, ಪ್ರಹ್ಲಾದಪ್ಪ, ರಂಗಪ್ಪ ಇತರರಿದ್ದರು.

ಮಾಯಕೊಂಡಕ್ಕೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ: ದಾವಣಗೆರೆ: ದಾವಣಗೆರೆಯಿಂದ ಬಾಡ ಕ್ರಾಸ್, ಕುರ್ಕಿ, ಅತ್ತಿಗೆರೆ, ಬಾಡ, ಅಣಬೇರು ಮೂಲಕ ಮಾಯಕೊಂಡ ಗ್ರಾಮಕ್ಕೆ ಸೋಮವಾರ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲಾಗಿದೆ.
ಕರೋನ ಹಿನ್ನೆಲೆಯಲ್ಲಿ ಮಾಯಕೊಂಡಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಶಾಸಕ ಕೆ.ಎಸ್.ಬಸವಂತಪ್ಪ ಅವರ ಸೂಚನೆ ಮೇರೆಗೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸ್ ಸೌಕರ್ಯ ಕಲ್ಪಿಸಿದ್ದಾರೆ ಎಂದು ಅಣಬೇರು ಶಿವಮೂರ್ತಿ ತಿಳಿಸಿದ್ದಾರೆ.