ಹೊನ್ನಾಳಿ: ಭತ್ತ ಬೆಳೆಗಾರರನ್ನು ರಾಜ್ಯ ಸರ್ಕಾರ ನಡುನೀರಿನಲ್ಲಿ ಕೈಬಿಟ್ಟಿದೆ, ಬೆಂಬಲ ಬೆಲೆ ಘೊಷಣೆ ಮಾಡದೆ ಇರುವುದರಿಂದ ರೈತರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ರಾಜ್ಯ ರೈತ ಸಂಘದ ಮುಖಂಡ ಕುರುವ ಗಣೇಶಪ್ಪ ಸರ್ಕಾರದ ವಿರುದ್ಧ ಹರಿಹಾಯ್ದರು.
ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷದಲ್ಲಿ ಸೋನಮಸೂರಿ ಭತ್ತಕ್ಕೆ 3300 ರೂ. ದರವಿತ್ತು. ಆದರೆ ಈ ಬಾರಿ 1600 ರೂ. ಇದ್ದರೂ ಖರೀದಿದಾರರಿಲ್ಲದೇ ಬೆಳೆದ ಭತ್ತ ಕೊಳೆಯುತ್ತಿದೆ. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ರಾಜ್ಯದಲ್ಲಿ ಮಳೆಯಾಗುತ್ತಿದ್ದು ಬಹಳಷ್ಟು ರೈತರು ಭತ್ತ ಕಟಾವು ಮಾಡಿ ರಸ್ತೆಯ ಮೇಲೆ ಹಾಕಿಕೊಂಡು ಅದನ್ನು ಮಳೆಯಿಂದ ರಕ್ಷಿಸಲು ಕೃಷಿ ಇಲಾಖೆ ನೀಡಿದ ಟಾರ್ಪಲ್ಗಳನ್ನು ಹೊದಿಸಿದ್ದಾರೆ. ಆದರೆ ಕಳಪೆ ಟಾರ್ಪಲ್ಗಳ ಕಾರಣ ಭತ್ತ ಮಳೆಗೆ ಸಂಪೂರ್ಣ ಒದ್ದೆಯಾಗಿ ಕೊಳೆಯುತ್ತಿದೆ. ಮಿಲ್ಗಳವರು ಹಾಗೂ ವರ್ತಕರು ಭತ್ತ ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪುತ್ತಿದ್ದಾನೆ. ಕೂಡಲೇ ಸರ್ಕಾರ ಕೃಷಿಕರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.
ಈ ಮಧ್ಯ ಚಂಡೀಗಢ, ಆಂಧ್ರ ಮುಂತಾದ ಹೊರರಾಜ್ಯಗಳಿಂದ ಅಕ್ಕಿ ಬರುತ್ತಿದ್ದು, ರಾಜ್ಯದ ಭತ್ತ ಅಥವಾ ಅಕ್ಕಿಯನ್ನು ಕೇಳುವವರೇ ಇಲ್ಲದಂತಾಗಿದೆ. ಭತ್ತ ಖರೀದಿಸಿದ ವರ್ತಕರಿಗೆ ಸರಿಯಾದ ಬೆಲೆ ಇಲ್ಲದೇ ಖರೀದಿಸಿದ ಭತ್ತಕ್ಕೆ ಹಣ ಪಾವತಿ ಮಾಡಲಾಗದೇ ಪರದಾಡುವಂತಾಗಿದೆ ಎಂದರು.
ರಾಜ್ಯ ರೈತ ಮುಖಂಡ ಕರಿಬಸಪ್ಪ ಮಾತನಾಡಿ, ಸರ್ಕಾರ ಜನತೆಗೆ 5 ಗ್ಯಾರಂಟಿಗಳನ್ನು ನೀಡಿದೆ. ರೈತರ ಬದುಕು ದುಸ್ತರವಾಗಿದ್ದು, ಅವರ ನೆರವಿಗೆ 6 ನೇ ರೈತ ಗ್ಯಾರಂಟಿಯನ್ನು ನೀಡಲು ಮುಂದಾಗಬೇಕು. ಭತ್ತಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರ ಕೂಡ ಹೆಚ್ಚುವರಿಯಾಗಿ ಕನಿಷ್ಠ ಒಂದು ಸಾವಿರ ರೂ. ಬೆಂಬಲ ಬೆಲೆ ನೀಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾದರೂ ಸಾಧನ ಸಮಾರಂಭ ಮಾಡುತ್ತಿದೆಯೇ ಹೊರತು ರೈತರ, ಜನರ ನೈಜ ಕಷ್ಟಗಳ ಕಡೆ ಗಮನ ಹರಿಸುತ್ತಿಲ್ಲ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಇದುವರೆಗೆ ಒಂದು ಬಾರಿಯೂ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಕಷ್ಟ ಕೇಳಲಿಲ್ಲ. ರಾಜ್ಯದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇಲ್ಲದೆ ಜನತೆ ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಸ್ಥಳೀಯ ಶಾಸಕರೂ ರೈತರ ಸಮಸ್ಯೆಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು ಮೂರು ದಿನಗಳ ಒಳಗಾಗಿ ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲವಾದಲ್ಲಿ ಶಾಸಕರ ಮನೆ ಮುಂದೆ ಭತ್ತ ಸುರಿದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ. ಬಸಪ್ಪ, ಮುಖಂಡರಾದ ಬಿದರಗಟ್ಟೆ ಭರ್ಮಪ್ಪ ಗೌಡ, ಬೆಳಗುತ್ತಿ ಉಮೇಶ್, ಶುಂಠಿ ಗಣೇಶಪ್ಪ, ಬಸವರಾಜಪ್ಪ, ಜಿ.ಪಿ. ಮಂಜುನಾಥ್, ಪಿ. ಮಹಾದೇವಪ್ಪ ಹರಳಹಳ್ಳಿ, ಮಂಜಪ್ಪ ಗೊರಟ್ಟಿ ಮಾತನಾಡಿದರು. ಹಲವಾರು ರೈತ ಮುಖಂಡರು ಹಾಜರಿದ್ದರು.