ಸಿಂಧನೂರು: ಯಾವುದೇ ರಾಜ್ಯ ಇರಲಿ, ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡವರು ನೀತಿ ಆಯೋಗದ ಸಭೆಗೆ ಹೋಗುತ್ತಾರೆ. ಆದರೆ, ಸಿಎಂ ಸಿದ್ದರಾಮಯ್ಯ ಯಾವ ಕಾರಣವಿಲ್ಲದೆ, ರಾಜಕೀಯ ದುರುದ್ದೇಶಕ್ಕೆ ಗೈರಾಗಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ಆರೋಪಿಸಿದರು.
ಇದನ್ನೂ ಓದಿ: ಮೈಸೂರಿನಲ್ಲಿ ಜೂ.22ರಂದು ರಾಜ್ಯ ಮಟ್ಟದ ಯೋಗ ಸಮ್ಮೇಳನ
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಹಿಂದಿನ ಅವಧಿ, ಈಗಿನ ಆಡಳಿತಕ್ಕೂ ಅಜಾಗಜಾಂತರ ವ್ಯತ್ಯಾಸವಿದೆ. ಈಗ ಸಿದ್ದರಾಮಯ್ಯ ದುರುದ್ದೇಶದಿಂದ ಆಡಳಿತ ನಡೆಸುತ್ತಿದ್ದಾರೆ. ದೇಶದಲ್ಲಿ ನಡೆಯುವ ನೀತಿ ಆಯೋಗದ ಸಭೆ ಅತಿ ಮಹತ್ವದ್ದಾಗಿದೆ. ಆರ್ಥಿಕ ಸ್ಥಿತಿಗತಿಗಳ ಚರ್ಚೆ ನಡೆಯುತ್ತದೆ.
ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆ ಕುರಿತು ಪ್ರಧಾನಿ ಅವರ ಜತೆ ಚರ್ಚೆ ಮಾಡುವ ಸುಸಂದರ್ಭ. ಆದರೆ, ಸಭೆಗೆ ಸಿಎಂ ಸಿದ್ದರಾಮಯ್ಯ ಗೈರಾಗುವ ಮೂಲಕ ಅಭಿವೃದ್ಧಿ ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
ರಾಜಕೀಯ ಕಾರಣದಿಂದ ಕೇಂದ್ರ ಸರ್ಕಾರದ ಪ್ರತಿ ಸಭೆಗೆ ಗೈರಾಗುತ್ತಿದ್ದಾರೆ. ಇದರಿಂದ ರಾಜ್ಯಕ್ಕೆ ಸಿಗಬೇಕಾದ ಮಹತ್ವ, ಅನುದಾನಕ್ಕೆ ಸಮಸ್ಯೆಯಾಗುತ್ತಿದೆ. ರಾಜಕೀಯ ದುರುದ್ದೇಶವಿಟ್ಟುಕೊಂಡೆ, ಜನಪರವಾಗಿದ್ದ ಜನೌಷಧ ಕೇಂದ್ರಗಳನ್ನು ಬಂದ್ ಮಾಡಿಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಯಲ್ಲಿ ಸಾಧನೆ ಶೂನ್ಯವಾಗಿದೆ ಎಂದು ವೀರನಗೌಡ ಪಾಟೀಲ್ ಲೆಕ್ಕಿಹಾಳ ಆರೋಪಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಗಣತಂತ್ರ ವ್ಯವಸ್ಥೆಯಲ್ಲಿ ಸಿಎಂ ಸಿದ್ದರಾಮಯ್ಯ ಏನು ಮಾಡುತ್ತಿದ್ದೇನೆಂಬುದು ಅವರಿಗೆ ಗೊತ್ತಾಗುತ್ತಿಲ್ಲ. ಜನಪರ ಯೋಜನೆಗಳನ್ನು ಬಂದ್ ಮಾಡುವ ಮೂಲಕ ಅಧಿಕಾರದ ಪರಮಾವಧಿ ಮೆರೆಯುತ್ತಿದ್ದಾರೆ. ಇದು ಬಹಳ ದಿನ ಉಳಿಯುವುದಿಲ್ಲ.
ನೀತಿ ಆಯೋಗದ ಸಭೆಗೆ ಭಾಗವಹಿಸುವುದು ಸಿಎಂ ಆದ್ಯ ಕರ್ತವ್ಯ. ಆದರೆ, ರಾಜಕೀಯ ಕಾರಣಕ್ಕೆ ಸಭೆ ಬಹಿಷ್ಕರಿಸಿರುವುದು ಸರಿಯಲ್ಲ ಎಂದರು. ಬಿಜೆಪಿ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಪ್ರಮುಖರಾದ ಕೆ.ಕರಿಯಪ್ಪ, ಲಿಂಗರಾಜ ಹೂಗಾರ, ಶಿವಬಸನಗೌಡ ಗೊರೇಬಾಳ, ಮೂರ್ತಿ ಇತರರಿದ್ದರು.