ಜಿಲ್ಲೆ

ಭವಿಷ್ಯದಲ್ಲಿ ಬಿಜೆಪಿಯಾಗಲಿದೆ ಸದೃಢ ಸಂಘಟನೆ

ಚನ್ನಗಿರಿ: ಬಿಜೆಪಿ ಕಾರ್ಯಕರ್ತರು ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬೂತ್​ಗಳಲ್ಲಿ ಸೈನಿಕರಂತೆ ಕೆಲಸ ಮಾಡುವ ಮೂಲಕ ಮತ ಪರಿಷ್ಕರಣೆ ಮಾಡಬೇಕಿದೆ ಎಂದು ರಾಜ್ಯ ಸಂಚಾಲಕ ಪಿ. ರಾಜೀವ್ ತಿಳಿಸಿದರು.

ಇಲ್ಲಿನ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಲ್​ಎ-2 ಕಾರ್ಯಾಗಾರದಲ್ಲಿ ಮಾತನಾಡಿದರು.

ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 255 ಬೂತ್​ಗಳು ಇದೆ. ಪ್ರತಿ ಬೂತ್​ಗಳಲ್ಲಿ ಬಿಎಲ್​ಎಗಳು ಪರಿಷ್ಕರಣೆಗಾಗಿ ಹೋದಂತ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಜತೆಯಲ್ಲಿದ್ದುಕೊಂಡು ಸಹಕಾರ ನೀಡಬೇಕು. ಮೃತರಾದವರು, ಗ್ರಾಮ, ಪಟ್ಟಣ ಬಿಟ್ಟು ಹೋಗಿರುವವರನ್ನು ಗುರುತಿಸಬೇಕು ಮತ್ತು ಅನೇಕ ಕಡೆಗಳಲ್ಲಿ ಬರುವ ಹೆಸರನ್ನು ತೆಗೆದು ಹಾಕುವ ಕೆಲಸ ಮಾಡಬೇಕು ಎಂದು ಹೇಳಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯದಲ್ಲಿರುವ ನಿಜವಾದ ಮತದಾರರು ಮಾತ್ರ ಮತದಾನ ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಬೂತ್ ಏಜೆಂಟರದ್ದಾಗಿರುತ್ತದೆ ಎಂದರು.

ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ದಿನದಿಂದ ದಿನಕ್ಕೆ ಅಸ್ಥಿರಗೊಳ್ಳುತ್ತಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಚುನಾವಣೆಯಾಗಬಹುದಾಗಿದ್ದು ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ಧರಿರಬೇಕು. ಮೊದಲ ಹಂತದಲ್ಲಿ ಸರಿಯಾದ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ಮಲಹಾಳ್ ಡಿ.ಸಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗದ ಮಾಜಿ ಜಿಲ್ಲಾಧ್ಯಕ್ಷ ಮೇಘರಾಜ್, ದಾವಣಗೆರೆ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಬಿಜೆಪಿ ತಾಲೂಕು ಮುಖಂಡರಾದ ಎ.ಎಸ್. ಬಸವರಾಜಪ್ಪ, ಕುಬೇಂದ್ರೋಜಿರಾವ್, ಧನಂಜಯ, ಕೊಟ್ರೇಶ್, ಪಿ.ಬಿ. ನಾಯಕ ಸೇರಿ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಎಲ್ಲ ಬೂತ್ ಏಜೆಂಟರು ಇದ್ದರು.