ವಿಜಯವಾಣಿ ಸುದ್ದಿಜಾಲ ಉಡುಪಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ 11 ಅಮಾಯಕರ ಸಾವಿನ ಬಗ್ಗೆ ದೇಶಾದ್ಯಂತ ವ್ಯಾಪಕ ಖಂಡನೆಗೆ ಬೆದರಿ, ಸರ್ಕಾರದ ವೈಫಲ್ಯ ಮರೆಮಾಚಲು ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಬಲಿಪಶು ಮಾಡಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ ಅವರೇ ಆ ದುರ್ಘಟನೆಗೆ ಪೊಲೀಸರು ಹೊಣೆಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೂ ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದು ಸರ್ಕಾರದ ವರ್ಚಸ್ಸಿನ ಮೇಲೆ ಉಂಟಾಗಿದ್ದ ಹಾನಿ ನಿಯಂತ್ರಿಸಲು ಈ ಕ್ರಮ ಕೈಗೊಂಡಿದ್ದಾರೆ.
ಆರ್ಸಿಬಿ ತಂಡದ ಐತಿಹಾಸಿಕ ಗೆಲುವಿನ ಸಾಧನೆಯನ್ನು ತಮ್ಮ ರಾಜಕೀಯ ಪ್ರತಿಷ್ಠೆಗೆ ಬಳಸಿಕೊಳ್ಳಲು ಯತ್ನಿಸಿದ್ದಾರೆ. ಪೊಲೀಸರು ನೀಡಿದ ಅಪಾಯದ ಸೂಚನೆಯನ್ನೂ ಪರಿಗಣಿಸದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಯಾವುದೇ ಪೂರ್ವ ತಯಾರಿ ಇಲ್ಲದೆ ಕ್ರಿಕೆಟ್ ಆಟಗಾರರ ಸನ್ಮಾನ ಏರ್ಪಡಿಸಿದ್ದರಿಂದ 11 ಜನರು ವಿನಾಕಾರಣ ಸಾಯುವಂತಾಗಿದೆ. ಯುವ ಜನತೆಯ ಆ ಹೃದಯವಿದ್ರಾವಕ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆ ಹೊತ್ತಿಕೊಳ್ಳಬೇಕು.
ಬಳಿಕ ನಡೆದ ದುರಂತಕ್ಕೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರದ ಈ ಕ್ರಮ ಪೊಲೀಸ್ ಇಲಾಖೆಯ ಮಾನಸಿಕ ಸ್ಥೈರ್ಯವನ್ನೇ ಕುಗ್ಗಿಸಿದೆ. ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಪೊಲೀಸ್ ಇಲಾಖೆಗೂ ಇದು ಎಚ್ಚರಿಕೆಯ ಕರೆಗಂಟೆ. ಸರ್ಕಾರದ ಸ್ವಯಂಕೃತ ಅಪರಾಧದಿಂದ ಸಮಸ್ಯೆ ಉಂಟಾದಾಗ ಪೊಲೀಸರನ್ನೇ ಬಲಿಪಶು ಮಾಡಲೂ ಕಾಂಗ್ರೆಸ್ ಸರ್ಕಾರ ಹಿಂಜರಿಯುವುದಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಯಶ್ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.