ಸುಳ್ಯ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಕೆ.ನಾಗಣ್ಣ ಗೌಡ ಸುಳ್ಯಕ್ಕೆ ಭೇಟಿ ನೀಡಿ ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸುಳ್ಯದ ಐಬಿಯಲ್ಲಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು ಶಾಲೆಗಳು, ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಹಕ್ಕುಗಳ ಸುರಕ್ಷತೆ ಉದ್ದೇಶದಿಂದ ಸಹಾಯವಾಣಿ ಸಂಖ್ಯೆ 1098 ಹಾಗೂ 112 ನ್ನು ಕಡ್ಡಾಯವಾಗಿ ಎಲ್ಲರಿಗೂ ಕಾಣುವಂತೆ ಅಳವಡಿಸಬೇಕು. ಮಕ್ಕಳಿಗೆ ಇರುವ ದೂರು ಬಾಕ್ಸ್‌ನ್ನು ಸಿಸಿಟಿವಿ ಇರುವ ಜಾಗದಲ್ಲಿ ಅಳವಡಿಸಿ ಅವರಿಗೆ ದೂರು ನೀಡಲು ಭಯ ಪಡುವ ಹಾಗೆ ಮಾಡಬಾರದು. ಶಾಲೆ ಹಾಗೂ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಶಾಲಾ ವಾಹನದಲ್ಲೂ ಸುರಕ್ಷತೆ ಕಡೆಗೆ ಗಮನ ನೀಡಬೇಕು. ವಾಹನದ ಚಾಲಕರ ಬಗ್ಗೆ ಗಮನ ವಹಿಸಿ ಎಂದು ಸಲಹೆ ನೀಡಿದರು.
ಮಕ್ಕಳ ಹಕ್ಕುಗಳ ರಕ್ಷಣಾ ಸಂಬಂಧಿಸಿದ ತಾಲೂಕು ಮಟ್ಟದ ಸಮಿತಿಗಳ ಸಭೆ ಎರಡು ತಿಂಗಳಿಗೊಮ್ಮೆ ಪ್ರಮುಖ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಿ, ತಾಲೂಕಿನ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು.
ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ದ.ಕ.ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ಕಾರು, ದಕ್ಷಿಣ ಕನ್ನಡ ಜಿಲ್ಲಾ ಸಹಾಯವಾಣಿ ವಿಭಾಗದ ಜಸ್ಮಿತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕುಮಾರ್, ನಾಸಿರ್, ಸುಳ್ಯ ತಹಸೀಲ್ದಾರ್ ಮಂಜುಳಾ, ಸಿಡಿಪಿಒ ಶೈಲಜಾ, ಬಿಇಒ ಕಚೇರಿ ಶಿಕ್ಷಣ ಸಂಯೋಜಕಿ ಸಂಧ್ಯಾ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾ ಟಿ., ತಾಪಂ ಪ್ರಭಾರ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.