ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಮಾಡಲು ಮುಂದಾಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಯತ್ನಕ್ಕೆ ಸದ್ಯ ಬ್ರೇಕ್ ಹಾಕಿರುವ ಹೈಕಮಾಂಡ್ಗೆ ಮುಂದೇನು ಮಾಡಬೇಕು ಎನ್ನುವುದು ಸವಾಲಾಗಿ ಪರಿಣಮಿಸಿದೆ. ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಅರುಣ್ ಸಿಂಗ್ ಅವರ ಬೆಂಗಳೂರು ಭೇಟಿ ನಂತರವಷ್ಟೇ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆ ಮಾಡುವುದಾದರೆ ಯಾರನ್ನು ಕೈ ಬಿಡಬೇಕು, ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ಪಟ್ಟಿ ಸಹಿತ ನೀಡಿರುವ ಯಡಿಯೂರಪ್ಪ, ತಮ್ಮ ಪಾಲಿನ ಜವಾಬ್ದಾರಿಯನ್ನು ಹೈಕಮಾಂಡ್ ಮೇಲೆ ಹಾಕಿ ಮುಕ್ತರಾಗಿದ್ದಾರೆ. ಆಗ್ಗಿಂದಾಗ್ಗೆ ಹೈಕಮಾಂಡ್ ಬಿಎಸ್ವೈರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಬಗ್ಗೆ ವೀರಶೈವ ಲಿಂಗಾಯತ ಸಮುದಾಯದಲ್ಲೂ ಅಸಮಾಧಾನ ವ್ಯಕ್ತವಾಗುತ್ತಿದೆ. ಖುದ್ದು ಸಿಎಂ ದೆಹಲಿಗೆ ಹೋಗಿ ಮನವಿ ಮಾಡಿದ್ದರೂ, ಅದಕ್ಕೆ ಹೈಕಮಾಂಡ್ ಸ್ಪಂದನೆ ಮಾಡಲಿಲ್ಲ ಎಂಬ ಸುದ್ದಿ ಹಬ್ಬುತ್ತಿದ್ದು, ಈ ಕಳಂಕ ನಿವಾರಿಸಿಕೊಳ್ಳಲು ಸಂಪುಟ ವಿಸ್ತರಣೆಗೆ ಗ್ರೀನ್ಸಿಗ್ನಲ್ ನೀಡುವುದೇ ಉತ್ತಮ ಎನ್ನುವ ಅಭಿಪ್ರಾಯ ವರಿಷ್ಠರ ಹಂತದಲ್ಲಿದೆ. ಈಗ ಸಿಎಂ ಕೊಟ್ಟಿರುವ ಪಟ್ಟಿಯನ್ನು ಪರಿಗಣಿಸಿ, ಅದರಲ್ಲಿ ಒಂದಿಷ್ಟು ಬದಲಾವಣೆ ಮಾಡಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಡುವ ಸಾಧ್ಯತೆ ದಟ್ಟವಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅರುಣ್ ಸಿಂಗ್ ರಾಜ್ಯಕ್ಕೆ ಶೀಘ್ರದಲ್ಲೇ ಆಗಮಿಸಲಿದ್ದು, ಎರಡು ದಿನಗಳ ಕಾಲ ಇಲ್ಲಿಯೇ ತಂಗಲಿದ್ದಾರೆ. ಈ ವೇಳೆ ಸಿಎಂರನ್ನು ಭೇಟಿ ಮಾಡಲಿದ್ದಾರೆ. ಇದೇ ಸಂದರ್ಭ ಸಚಿವರು, ಪಕ್ಷದ ಮುಖಂಡರು ಮತ್ತಿತರರ ಜತೆೆ ಸಭೆ ನಡೆಸಿ, ಇಲ್ಲಿನ ಸದ್ಯದ ರಾಜಕೀಯ ಸ್ಥಿತಿ -ಗತಿ ಬಗ್ಗೆ ಹೈಕಮಾಂಡ್ಗೆ ವರದಿ ನೀಡಿದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡ್ಮೂರು ದಿನದಲ್ಲಿ ವಿಸ್ತರಣೆ
ಸಂಪುಟ ವಿಸ್ತರಣೆ ಇನ್ನು ಎರಡ್ಮೂರು ದಿನಗಳಲ್ಲಿ ನಡೆಯಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಈ ಬಾರಿ ಸಂಪುಟ ವಿಸ್ತರಣೆಯೋ, ಇಲ್ಲವೆ ಪುನಾರಚನೆಯೋ ಎಂಬ ಪ್ರಶ್ನೆಗೆ, ಎರಡರಲ್ಲಿ ಒಂದಂತೂ ಖಚಿತ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಸದ್ಯದಲ್ಲಿ ನಿಗದಿಪಡಿ ಸಲಾಗುವುದು ಎಂದರು. ಯಾರ್ಯಾರನ್ನು ಸಂಪುಟಕ್ಕೆ ಸೇರ್ಪಡೆ ಮಾಡಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ. ಎರಡ್ಮೂರು ದಿನದೊಳಗೆ ಎಲ್ಲ ಊಹಾಪೋಹಗಳಿಗೆ ತೆರೆ ಬೀಳಲಿದೆ ಎಂದು ಸಿಎಂ ಹೇಳಿದರು. ಕೆಲ ಶಾಸಕರು ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಶಾಸಕರು ಪಕ್ಷದ ಅಧ್ಯಕ್ಷರನ್ನು ಭೇಟಿಯಾದರೆ ತಪ್ಪೇನಿಲ್ಲ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಮುಖ್ಯಮಂತ್ರಿ ಬದಲಾವಣೆಯೋ? ಅದು ನಿಮ್ಮ ಪಕ್ಷದ ಹಣೆಬರಹ. ಈ ಸರ್ಕಸ್ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ. ಶೀಘ್ರವಾಗಿ ಏನಾದರೂ ನಿರ್ಧಾರ ಕೈಗೊಂಡು ಈಗಿನ ಬಿಕ್ಕಟ್ಟು ಕೊನೆಗಾಣಿಸಿ ರಾಜ್ಯ ಉಳಿಸಿ. ಹೈಕಮಾಂಡ್ ಸಂಸ್ಕೃತಿ, ಮೂಲ-ವಲಸಿಗ, ಕುಟುಂಬ ರಾಜಕಾರಣವೆಂಬ ಪದಗಳನ್ನು ಜೋಡಿಸಿ ನಮ್ಮನ್ನು ಟೀಕಿಸುತ್ತಿದ್ದ ಬಿಜೆಪಿ ಈಗ ಬೆತ್ತಲಾಗಿದೆ. | ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ
ಮಸ್ಕಿ, ಬಸವಕಲ್ಯಾಣದಲ್ಲಿ ಕೇಸರಿ ಧ್ವಜ ಹಾರಿಸುವ ಸಂಕಲ್ಪ
ಸಿಂಧನೂರು(ರಾಯಚೂರು): ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕೇಸರಿ ಧ್ವಜ ಹಾರಿಸುವ ಸಂಕಲ್ಪ ಮಾಡಿದ್ದು, ಜತೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಬಿಜೆಪಿ ಧ್ವಜ ಹಾರಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು. ಬಿಜೆಪಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಈಗಾಗಲೆ ಶಿರಾ ಹಾಗೂ ಆರ್ಆರ್ ನಗರ ಉಪಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿದ್ದೇವೆ. ಎಲ್ಲ ಉಪಚುನಾವಣೆ ಮುಗಿದ ನಂತರ ನಮ್ಮ ವಿಜಯೀಯಾತ್ರೆ ಗ್ರಾಪಂ ಚುನಾವಣೆಗೆ ವಿಸ್ತರಣೆಗೊಳ್ಳಲಿದೆ. ನಮಗೆ ಶೇ.80 ಗ್ರಾಪಂ ಗೆದ್ದುಕೊಳ್ಳುವ ಬಲ ಇದೆ ಎಂದರು.
ವೇದಿಕೆ ಏರದ ಬಿವೈವಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವೇದಿಕೆ ಮುಂಭಾಗ ಪದಾಧಿಕಾರಿಗಳಿಗೆ ಹಾಕಿದ್ದ ಆಸನದಲ್ಲಿ ಕುಳಿತು ಗಮನ ಸೆಳೆದರು. ಸಭೆಯ ವೇದಿಕೆಯನ್ನೂ ಏರದೆ, ಸಾಮಾನ್ಯ ಪದಾಧಿಕಾರಿಯಂತೆ ಗುರುತಿಸಿಕೊಂಡರು.
ಶಿರಾ ಚುನಾವಣೆಯಲ್ಲಿ ನನ್ನೊಬ್ಬನಿಂದಲೇ ಗೆಲುವು ಸಾಧ್ಯವಾಗಿದೆ ಎಂದು ಹೇಳುವುದಿಲ್ಲ. ಪಕ್ಷದ ಎಲ್ಲ ಕಾರ್ಯಕರ್ತರ ಪರಿಶ್ರಮದಿಂದ ಗೆಲುವು ಸಿಕ್ಕಿದೆ. ಬಸವಕಲ್ಯಾಣ ಉಪಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ನಾನು ರಾಜ್ಯ ಉಪಾಧ್ಯಕ್ಷನಾಗಿದ್ದೇನೆ. ಪಕ್ಷ ವಹಿಸುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವೆ. | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ
ಸಂತೋಷ್ರನ್ನು ಭೇಟಿಯಾದ ಜಾರಕಿಹೊಳಿ
ನವದೆಹಲಿ: ಕಳೆದ ಮೂನಾಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಶುಕ್ರವಾರ ಭೇಟಿ ಮಾಡಿ ಸರ್ಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ತಂದಿದ್ದಾರೆ.
ಪರಿಷತ್ ಸದಸ್ಯ ಎಚ್.ವಿಶ್ವನಾಥ್ಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಅವರ ಮುಖ್ಯ ಬೇಡಿಕೆ ಎಂದು ತಿಳಿದುಬಂದಿದೆ. ಆರ್.ಶಂಕರ್, ಮುನಿರತ್ನ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಬಿಜೆಪಿ ಮುಖಂಡರಲ್ಲಿ ಒಮ್ಮತವಿದ್ದರೂ,
ವಿಶ್ವನಾಥ್ಗೆ ನೀಡುವ ಬಗ್ಗೆ ಸಹಮತ ಮೂಡಿಲ್ಲ. ಹೀಗಾಗಿ, ಸಂತೋಷ್ರನ್ನು ಭೇಟಿ ಮಾಡಿ ಮನವೊಲಿಸುವ ಯತ್ನ ಮಾಡಿದ್ದಾರೆನ್ನಲಾಗಿದೆ. ಸಿ.ಪಿ.ಯೋಗೇಶ್ವರ್ಗೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೂ, ರಮೇಶ್ ಜಾರಕಿಹೊಳಿ ಆ ಬಗ್ಗೆ ಹೆಚ್ಚು ಒತ್ತಡ ಹೇರಿಲ್ಲ ಎಂದು ತಿಳಿದುಬಂದಿದೆ.
ಸಂತೋಷ್ ಭೇಟಿ ಬಳಿಕ ಜಾರಕಿಹೊಳಿ ಮಾತನಾಡಿ, ಸರ್ಕಾರ ರಚನೆಗೆ ಕಾರಣರಾದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು. ನಾವೆಲ್ಲರೂ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದೇವೆ. ಅವರ ಭರವಸೆಯಿಂದಲೇ ಪಕ್ಷ ಸೇರಿದ್ದೇವೆ. ನಮಗೆ ಅನ್ಯಾಯ ಆಗಬಾರದು ಎಂದು ಹೇಳಿದ್ದೇನೆ ಮತ್ತು ವರಿಷ್ಠರ ಮೇಲೆ ವಿಶ್ವಾಸವಿದೆ. ಶೀಘ್ರದಲ್ಲಿ ಸಂಪುಟ ವಿಸ್ತರಣೆ ಆಗಬೇಕೆಂಬ ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರತ್ಯೇಕ ಸಭೆ ನಡೆಸುವ ಅಶಿಸ್ತು ಸಹಿಸಲ್ಲ
ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಯಾವುದೇ ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸಿದರೆ ಸಹಿಸುವುದಿಲ್ಲವೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಎಚ್ಚರಿಕೆ ನೀಡಿದ್ದಾರೆ. ಶಾಸಕ ರೇಣುಕಾಚಾರ್ಯ ಸೇರಿ ಕೆಲವರು ನಳಿನ್ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಸಭೆ ನಡೆಸಬೇಕಾಗುತ್ತದೆ ಎಂದು ಹೇಳಿ ಬಂದಿದ್ದರು. ಅದರ ಬೆನ್ನ ಹಿಂದೆಯೇ ಸಿ.ಟಿ.ರವಿ ನೀಡಿರುವ ಎಚ್ಚರಿಕೆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೆ ಸಾಬೀತು ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಸಿ.ಟಿ.ರವಿ ಮಾತನಾಡಿ, ಪಕ್ಷದಲ್ಲಿ ಶಿಸ್ತು ಮುಖ್ಯ, ಅಶಿಸ್ತನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಪಕ್ಷಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಯಾರೊಬ್ಬರು ಮಾಡಬಾರದು ಎಂದು ಎಚ್ಚರಿಸಿದರು. ಮುಂದಿನ ವಿಧಾನಮಂಡಲ ಅಧಿವೇಶನ ದಲ್ಲಿ ಗೋಹತ್ಯೆ ಹಾಗೂ ಲವ್ ಜಿಹಾದ್ಗಳ ನಿಷೇಧಕ್ಕೆ ಕಠಿಣ ಕಾನೂನು ರೂಪಿಸಲಾಗುತ್ತದೆ ಎಂದ ರವಿ, ಮಂಗಳೂರಿನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಅವರೇ ಈ ಬಗ್ಗೆ ಹೇಳಿದ್ದಾರೆ. ಆದ್ದರಿಂದ ಕಾನೂನು ಬರುವುದರಲ್ಲಿ ಯಾವುದೇ ಅನುಮಾನವೂ ಇಲ್ಲ ಎಂದು ಅಭಿಪ್ರಾಯಪಟ್ಟರು.
ತಮಿಳುನಾಡಿಗೆ ಇಂದು ಷಾ: ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಸರ್ಕಾರದ ಹಾಗೂ ಪಕ್ಷದ ಕಾರ್ಯಕ್ರಮ ಮತ್ತು ಸಭೆಗಳಲ್ಲಿ ಭಾಗವಹಿಸುತ್ತಾರೆ ಎಂದು ಸಿ.ಟಿ.ರವಿ ತಿಳಿಸಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ ವ್ಯಕ್ತಪಡಿಸುವವರು ಕಟುಕ ವಂಶದಿಂದ ಬಂದವರಾಗಿರುತ್ತಾರೆ. ಹಸು, ಎಮ್ಮೆ ಮೇಯಿಸುತ್ತಿದ್ದ ಸಿದ್ದರಾಮಯ್ಯ ಅಂತಹ ವಂಶದವರಲ್ಲ ಅಂದುಕೊಂಡಿದ್ದೇನೆ. ಸಿದ್ದರಾಮಯ್ಯ ಸಂಘದ ಶಾಖೆಗೆ ಭೇಟಿ ನೀಡಿ ಆರ್ಎಸ್ಎಸ್ ಬಗ್ಗೆ ತಿಳಿದುಕೊಳ್ಳಲಿ. ಅವರು ಬರುವುದಕ್ಕೆ ವಯಸ್ಸು ಅಡ್ಡಿಯಾದರೆ, ಅವರ ಮೊಮ್ಮಕ್ಕಳನ್ನು ಕಳುಹಿಸಲಿ. | ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬಿಜೆಪಿಯಿಂದ ಆರು ತಂಡ ರಚನೆ
ಮುಂಬರುವ ಗ್ರಾಪಂ ಚುನಾವಣೆ ಅಂಗವಾಗಿ ಬಿಜೆಪಿಯಿಂದ 6 ತಂಡಗಳನ್ನು ರಚಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಕೆ.ಎಸ್.ಈಶ್ವರಪ್ಪ, ಜಗದೀಶ ಶೆಟ್ಟರ್, ಆರ್.ಅಶೋಕ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ತಂಡಗಳು ನ.27ರಿಂದ ಡಿ.3 ರವರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿವೆ. ಈ ಕುರಿತು 23ರಂದು ಬೆಂಗಳೂರಿನಲ್ಲಿ ರಾಜ್ಯ ಮಂಡಳಿ ಸಭೆ ನಡೆಯಲಿದೆ. ಡಿ.3ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯಕ್ಕೆ ಆಗಮಿಸಲಿದ್ದು, ಅಂದು ಕೋರ್ ಕಮಿಟಿ, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಯಲಿದೆ. ಬೆಳಗಾವಿಯಲ್ಲಿ ಡಿ.4ರಂದು ರಾಜ್ಯ ಪದಾಧಿಕಾರಿಗಳ ಸಭೆ, ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದರು.
ಆರ್ಎಸ್ಎಸ್ ಒಂದು ಸಂಘಟನೆ. ಅದು ಪಕ್ಷವಲ್ಲ. ಅದು ಬಿಜೆಪಿಯನ್ನು ನಿಯಂತ್ರಣ ಮಾಡುತ್ತಿಲ್ಲ. ಲವ್ ಜಿಹಾದ್ ನಿಷೇಧ ಮಾಡೇ ಮಾಡುತ್ತೇವೆ. ಈ ಬಗ್ಗೆ ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ. ಗೋ ಹತ್ಯೆ ನಿಷೇಧವನ್ನೂ ಜಾರಿಗೆ ತರುತ್ತೇವೆ. ಕಾಂಗ್ರೆಸ್ನಲ್ಲೇ ಗೊಂದಲವಿದೆ. ಇದನ್ನು ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಅವರ ತಟ್ಟೆಯಲ್ಲೇ ನೊಣ, ಹೆಗ್ಗಣ ಬಿದ್ದಿವೆ. ಬಿಜೆಪಿ ತಟ್ಟೆಯಲ್ಲಿ ಸೊಳ್ಳೆ ಬಿದ್ದಿರುವುದನ್ನು ಹುಡುಕಬೇಡಿ. | ಆರ್.ಅಶೋಕ್ ಕಂದಾಯ ಸಚಿವ